ಕಾರವಾರ: ಎರಡು ಬಾರಿ ವಿಧಾನಸಭೆಯಲ್ಲಿ ಸಿಪಿಐಎಂ ಶಾಸಕರಾಗಿದ್ದ ಮತ್ತು ಸಿಪಿಐಎಂ ಪಕ್ಷದ ಮಾಜಿ ಕೇಂದ್ರ ಸಮಿತಿ ಸದಸ್ಯ ಹಾಗೂ ರಾಜ್ಯ ಸಮಿತಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದ ಜಿ.ವಿ.ಶ್ರೀರಾಮರೆಡ್ಡಿಯವರ ನಿಧನಕ್ಕೆ ಸಿಪಿಐಎಂ ಜಿಲ್ಲಾ ಸಮಿತಿ ಶ್ರದ್ಧಾಂಜಲಿ ಸಲ್ಲಿಸಿದೆ.
ಶ್ರೀರಾಮರೆಡ್ಡಿಯವರು ವಿದ್ಯಾರ್ಥಿ ದೆಸೆಯಲ್ಲಿಯೇ ಮಾರ್ಕ್ಸ್ ವಾದ ಹಾಗೂ ಲೆನಿನ್ ವಾದಕ್ಕೆ ಆಕರ್ಷಿತರಾಗಿ, ಚಳುವಳಿಗೆ ಧುಮುಕಿದವರು. ಅವರ ಜೀವಿತದ ಕೊನೆಯವರೆಗೆ ಅದರಲ್ಲಿಯೇ ಮುಂದುವರೆದವರು. ಅದಕ್ಕಾಗಿ ಅವರು ತಮ್ಮ ವೈವಾಹಿಕ ಜೀವನವನ್ನು ತ್ಯಜಿಸಿದ್ದರು. ರಾಜ್ಯದಲ್ಲಿ ವಿದ್ಯಾರ್ಥಿ ಹಾಗೂ ಯುವಜನ ಚಳುವಳಿಯ ಸಂಸ್ಥಾಪನಾ ಮುಖಂಡರಾಗಿದ್ದವರು ಮತ್ತು ರೈತ ಚಳುವಳಿ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಭೂಮಿ ಹೋರಾಟದಲ್ಲಿ ಜೈಲು ವಾಸವನ್ನು ಅನುಭವಿಸಿದ್ದರು ಎಂದು ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ಸ್ಮರಿಸಿದ್ದಾರೆ.
ಮುಖ್ಯವಾಗಿ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪ್ರಭಾವವನ್ನು ಉಳಿಸಿಕೊಂಡು ಬೆಳೆಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಇದರ ಪರಿಣಾಮವಾಗಿ ವಿಧಾನಸಭೆಯಲ್ಲಿ ಸಿಪಿಐಎಂ ಪಕ್ಷದ ಶಾಸಕರಾಗಿ ರಾಜ್ಯದ ದುಡಿಯುವ ಜನರ ಪರವಾದ ಬಲವಾದ ಧ್ವನಿಯಾಗಿದ್ದರು. ಬೆಂಗಳೂರು ನಗರದ ಲಕ್ಷಾಂತರ ಕೋಟಿ ರೂ ಮೌಲ್ಯದ ಸರಕಾರಿ ಜಮೀನಿನ ಭೂ ಕಬಳಿಕೆಯ ಭೂ ಮಾಫಿಯಾದ ವಿರುದ್ಧ ಧೃಢವಾದ ಧ್ವನಿ ಎತ್ತಿದವರು ಮಾತ್ರವಲ್ಲ, ಏಟಿ ರಾಮಸ್ವಾಮಿ ನೇತೃತ್ವದ ಸದಸನ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಬಳ್ಳಾರಿ ಗಣಿ ಮಾಫಿಯಾದ ವಿರುದ್ದ ಬಲವಾದ ಚಾಟಿ ಬೀಸಿದ್ದರು. ಅದೇ ರೀತಿ, ಜಾತಿ ತಾರತಮ್ಯ ಮೆರೆಯುತ್ತಿದ್ದ, ಮಡೆ ಸ್ನಾನ ಮತ್ತು ಉಡುಪಿ ಶ್ರೀಕೃಷ್ಣ ಮಠದ ಪಂಕ್ತಿ ಭೇದವನ್ನು ವಿರೋಧಿಸಿ ನಡೆಸಲಾದ ಸಿಪಿಐಎಂ ರಾಜ್ಯ ಮಟ್ಟದ ಹೋರಾಟದ ನೇತೃತ್ವ ವಹಿಸಿದ್ದರು ಎಂದು ತಿಳಿಸಿದ್ದಾರೆ.
ಬಾಗೇಪಲ್ಲಿ ಶಾಸಕರಾಗಿ ಅವರು ಅದರ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಗಳು ಜನ ಮಾನಸದಲ್ಲಿ ಅಚ್ಛಳಿಯದೇ ಉಳಿದಿವೆ. ಮಾಕ್ರ್ಸ್‍ವಾದದ ಹಿನ್ನೆಲೆಯಲ್ಲಿ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಮ್ಯುನಿಸ್ಟ್ ಚಳುವಳಿಗೆ ಮಾರ್ಗದರ್ಶನ ಮಾಡಿದ್ದನ್ನು ನೆನೆಯುತ್ತೇವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಜಾ ಸಾಂಸ್ಕøತಿಕ ಸಂಘಟನೆಯ ನೇತೃತ್ವ ವಹಿಸಿದ್ದರು. ಅಂತಿಮ ಘಳಿಗೆಯ ತನಕವೂ ಮಾರ್ಕ್ಸ್ ವಾದಿಯಾಗಿಯೇ ಉಳಿದರು ಎಂದಿದ್ದಾರೆ.