ಶಿರಸಿ: ಸಂಘದ ಸದಸ್ಯರಿಗೆ ಶಸ್ತ್ರಚಿಕಿತ್ಸೆಗೆ ಹಾಗೂ ಮೃತ ಸದಸ್ಯರ ಕುಟುಂಬಕ್ಕೆ ಪರಿಹಾರಧನವನ್ನು ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ. ನಿರ್ದೇಶಕ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ವಿತರಿಸಿದರು.
ತಾಲೂಕಿನ ನೇರ್ಲವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ದತ್ತಾತ್ರೇಯ ಆರ್.ಹೆಗಡೆ, ಹೆಗಡೆಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಬ್ಲೇಶ್ವರ ನಾಯ್ಕ, ಹುಲೇಕಲ್ ಹಾಲು ಉತ್ಪಾದಕರ ಸಹಕಾರಿ ಸಂಘದ ಮಧುಕರ ಹೆಗಡೆ, ಧೋರಣಗಿರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸುಬ್ರಾಯ ವೆಂಕಟರಮಣ ಭಟ್ ಇವರುಗಳ ಶಸ್ತ್ರಚಿಕಿತ್ಸಾರ್ಥವಾಗಿ ತಲಾ ರೂ.5000 ಮೊತ್ತದ ಚೆಕ್ ಅನ್ನು ಹಾಗೂ ಹುಣಸೇಕೊಪ್ಪ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯ ಮಂಜುನಾಥ ಗೌಡ ಇವರು ಮರಣ ಹೊಂದಿದ ಕಾರಣ ಅವರ ವಾರಸುದಾರರಾದ ಮಹಾಲಕ್ಷ್ಮೀ ಗೌಡ ಅವರಿಗೆ ರೂ.10,000 ಮೊತ್ತದ ಚೆಕ್ ಅನ್ನು ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರ ಸಹಕಾರಿ ಸಂಘಗಳ ವ್ಯವಸ್ಥೆಯಲ್ಲಿ ಈ ಮೊದಲಿಗಿಂತಲೂ ಗಂಭೀರವಾಗಿ ಕಣ್ಣಿಗೆ ಕಾಣುವ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ. ಜಿಲ್ಲೆಯ ಹೈನೋದ್ಯಮದ ಅಭಿವೃದ್ಧಿಗಾಗಿ ಧಾರವಾಡ ಸಹಕಾರಿ ಹಾಲು ಒಕ್ಕೂಟ ಹಾಗೂ ಕಲ್ಯಾಣ ಸಂಘ ಹಾಲು ಉತ್ಪಾದಕರ ಜೊತೆ ಸದಾ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೈನುಗಾರರು ಹೈನೋದ್ಯಮ ವ್ಯವಸ್ಥೆಯಿಂದ ವಿಮುಖರಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಆಗಿದೆ ಎಂದರು. ಅದಕ್ಕಾಗಿ ಜಿಲ್ಲೆಯ ರೈತರು ಮನೆಗೊಂದು ಆಕಳನ್ನು ಸಾಕಿ ತಮ್ಮನ್ನು ತಾವು ಹೈನೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಧಿಕ ಹಾಲು ಉತ್ಪಾದಿಸಬೇಕೆಂದು ಈ ಮೂಲಕ ಅವರು ಮನವಿ ಮಾಡಿದರು.
ಜಿಲ್ಲೆಯ ಹೈನುಗಾರರ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಎಲ್ಲಾ ರೀತಿಯ ಸಹಾಯ ಸೌಲಭ್ಯಗಳನ್ನು ಒದಗಿಸಿಕೊಡಲು ಧಾರವಾಡ ಸಹಕಾರಿ ಹಾಲು ಒಕ್ಕೂಟ ಹಾಗೂ ಕಲ್ಯಾಣ ಸಂಘ ಯಾವುದೇ ಸಂದರ್ಭದಲ್ಲಿ ಸದಾ ಸಿದ್ಧವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಹುಲೇಕಲ್ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಧುಕರ ಹೆಗಡೆ, ಧೋರಣಗಿರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜೇಶ ಹೆಗಡೆ, ಹುಣಸೇಕೊಪ್ಪ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಲಕ್ಷ್ಮೀ ಗೌಡ, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕರು ಅಭಿಷೇಕ ನಾಯ್ಕ ಹಾಗೂ ಜಯಂತ ಪಟಗಾರ ಇದ್ದರು.