ಕಾರವಾರ: ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳು ಮುಕ್ತಾಯವಾಗಿದ್ದು, ಏ.18ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಿದ್ಧತಾ ಕಾರ್ಯ ಪ್ರಾರಂಭವಾಗಲಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಶಿರಸಿ ಒಟ್ಟು 12 ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆಯಲಿದೆ.
ಉತ್ತರ ಪತ್ರಿಕೆಗಳ ಮೌಲ್ಯಮಾಪನವು ದೋಷ ರಹಿತವಾಗಿ ನಡೆಸುವ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮೌಲ್ಯಮಾಪನ ನಡೆಯುವ ಕುಮಟಾ ಗಿಬ್ ಬಾಲಕರ ಪ್ರೌಢಶಾಲೆ, ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗಿಬ್ ಬಾಲಕಿಯರ ಪ್ರೌಢಶಾಲೆ, ಗಿಬ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ನಿರ್ಮಲಾ ಕಾನ್ವೆಂಟ್ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಹಾಗೂ ಶಿರಸಿಯ ಅವೆಮರಿಯಾ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ, ಎಂ.ಇ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸರಕಾರಿ ಉರ್ದು ಪ್ರೌಢಶಾಲೆ, ಸೇಂಟ್ ಅಂಥೋನಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಕೇಂದ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಶಾಂತ ವಾತಾವರಣದಲ್ಲಿ ಮೌಲ್ಯಮಾಪನ ನಡೆಸುವ ಉದ್ದೇಶದಿಂದ ಈ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಲಂ 144 ರನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಈ ಕುರಿತು ಪೊಲೀಸ್ ಅಧೀಕ್ಷಕರು ಈ ಆದೇಶವನ್ನು ಜಾರಿಗೆ ತರುವ ಬಗ್ಗೆ ಕ್ರಮ ಜರುಗಿಸಬೇಕೆಂದು ತಿಳಿಸಿದ್ದಾರೆ.
ಮೌಲ್ಯಮಾಪನ ನಡೆಯುವ ದಿನಗಳಂದು ಮೌಲ್ಯಮಾಪನ ನಡೆಯುವ ಸಮಯದಿಂದ ಮೌಲ್ಯಮಾಪನ ಅವಧಿ ಮುಕ್ತಾಯವಾಗುವವರೆಗೆ ಮೌಲ್ಯಮಾಪನ ಕೇಂದ್ರದ ಸುತ್ತಮುತ್ತ ಸಭೆ ಸಮಾರಂಭಗಳನ್ನು ಹಾಗೂ ಧ್ವನಿವರ್ಧಕಗಳನ್ನು ಬಳಸದಂತೆ ಆದೇಶ ನೀಡಲಾಗಿದ್ದು, ಸಾರ್ವಜನಿಕರು ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಮೌಲ್ಯಮಾಪನ ಕಾರ್ಯ ಸುಸೂತ್ರವಾಗಿ ನಡೆಯಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಮುಕ್ತ ಶಾಲಾ ಪರೀಕ್ಷೆ ನಾಳೆಯಿಂದ; ಕರ್ನಾಟಕ ಮುಕ್ತ ಶಾಲಾ ಪರೀಕ್ಷೆಗಳು ಏ.18ರಿಂದ 27ರವರೆಗೆ ನಡೆಯಲಿದ್ದು, ಈ ದಿನಗಳಂದು ಪರೀಕ್ಷೆ ನಡೆಯುವ ಸಮಯದಿಂದ ಪರೀಕ್ಷಾ ಅವಧಿ ಮುಕ್ತಾಯವಾಗುವವರೆಗೆ ಪರೀಕ್ಷಾ ಕೇಂದ್ರದ ಸುತ್ತಮುತ್ತ ಸಭೆ ಸಮಾರಂಭಗಳನ್ನು ಹಾಗೂ ಧ್ವನಿವರ್ಧಕಗಳನ್ನು ಬಳಸದಂತೆ ಮತ್ತು ಝೆರಾಕ್ಸ್ ಅಂಗಡಿ, ಸೈಬರ್ ಕೆಫೆಗಳನ್ನು ಪರೀಕ್ಷಾವಧಿಯಲ್ಲಿ ಮುಚ್ಚುವಂತೆ ಆದೇಶ ನೀಡಲಾಗಿದೆ. ಸಾರ್ವಜನಿಕರು ಪರೀಕ್ಷೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಪರೀಕ್ಷೆ ಸುಸೂತ್ರವಾಗಿ ನಡೆಯಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.