ಜೊಯಿಡಾ: ಕೃಷಿ ಇಲಾಖೆಯಿಂದ ಜಿಲ್ಲಾಡಳಿತ ಮತ್ತು ತಾಲೂಕಾ ಆಡಳಿತದ ಮಾರ್ಗದರ್ಶನದಲ್ಲಿ ಜೊಯಿಡಾವನ್ನು ಸಾವಯವ ಕೃಷಿ ತಾಲೂಕನ್ನಾಗಿ ಘೋಷಿಸುವ ಕುರಿತು ಕುಣಬಿ ಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರ್.ವಿ.ದೇಶಪಾಂಡೆ, ಜೊಯಿಡಾವನ್ನು ಸಾವಯವ ತಾಲೂಕನ್ನಾಗಿ ಮಾಡುವ ಉದ್ದೇಶ ಉತ್ತಮವಾಗಿದೆ. ಆದರೆ ಇಲ್ಲಿಯ ಜನರಿಗೆ ಸರಿಯಾದ ಮಾರುಕಟ್ಟೆ ಸಿಕ್ಕಿಲ್ಲ. ಇಲ್ಲಿಯ ಜನರು ಸಜ್ಜನರು. ಯಾವುದೇ ಯೋಜನೆ ತರುವಾಗ ಇಲ್ಲಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಪಂಚಾಯತಿಯವರ ಸಲಹೆಗಳನ್ನು ತೆಗೆದುಕೊಂಡು ಕೆಲಸ ಮಾಡಬೇಕು. ರೈತರು ದೇಶದ ಅನ್ನದಾತರು, ಸಾವಯವ ಕೃಷಿಯಿಂದ ಭೂಮಿಯ ಗುಣಮಟ್ಟ ಹೆಚ್ಚುತ್ತದೆ. ಯಾವುದೇ ಯೋಜನೆ ಜಾರಿಯಾಗಬೇಕಾದರೆ ಮಾನವ ಸಂಪನ್ಮೂಲ ಬೇಕು. ಹಾಗೆಯೇ ಅಧಿಕಾರಿಗಳನ್ನು ಈ ಯೋಜನೆಗೆ ಭರ್ತಿ ಮಾಡಬೇಕು. ಎಲ್ಲರ ಸಹಕಾರದಿಂದ ಜೊಯಿಡಾವನ್ನು ಸಾವಯವ ತಾಲೂಕನ್ನಾಗಿ ಮಾಡೋಣ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಮಾತನಾಡಿ, ಸಾವಯವ ಕೃಷಿಯಿಂದ ಜನರ ಆರೋಗ್ಯ ಸುಧಾರಿಸುತ್ತದೆ. ಸಾವಯವ ಕೃಷಿ ಮೂಲಕ ಮಕ್ಕಳ ಆಹಾರ ತಯಾರಿಕೆ ಮಾಡಿದಲ್ಲಿ ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಸಾವಯವ ಕೃಷಿ ತಾಲೂಕನ್ನಾಗಿಸಲು ಎಲ್ಲರ ಸಹಕಾರ ಅಗತ್ಯ. ಮರವನ್ನು ದೇವರೆಂದು ಪೂಜಿಸುವ ತಾಲೂಕು ಇದಾಗಿದ್ದು, ಈ ತಾಲೂಕನ್ನು ಸಾವಯುವ ತಾಲೂಕನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಭೆಯಲ್ಲಿ ಹಲವಾರು ಜನರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಕೃಷಿ ಯೋಜನೆಗೆ ನೀರಿನ ವ್ಯವಸ್ಥೆ, ತಾಲೂಕಿನ ರೈತರ ಪರಿಸ್ಥಿತಿ, ಜೇನು ಕೃಷಿ, ಹೈನುಗಾರಿಕೆ, ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿಇಓ ಪ್ರಿಯಾಂಗಾ ಎಂ., ರಾಜ್ಯ ಸಾವಯವ ಕೃಷಿ ಅಧಿಕಾರಯುಕ್ತ ಸಮಿತಿ ಅಧ್ಯಕ್ಷ ಆನಂದ ಉಪ್ಪಳಿ, ಕೃಷಿ ಅಧಿಕಾರಿ ನಂದಿನಿಕುಮಾರ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಿ.ವಿ.ಪಾಟೀಲ್, ವೆಂಕಟರಾಮ ರೆಡ್ಡಿ, ಕರುಣಾಕರ ಶೆಟ್ಟಿ, ತಾಲೂಕು ಕೃಷಿ ಅಧಿಕಾರಿ ಸುಷ್ಮಾ ಮಳಿಮಠ, ಸಿಪಿಐ ದಯಾನಂದ ಎಸ್., ತಹಶೀಲ್ದಾರ ಸಂಜಯ ಕಾಂಬಳೆ ಇತರರು ಇದ್ದರು.