ಕುಮಟಾ: ನಮ್ಮ ಕುಮಟಾ ಹಬ್ಬದ 3ನೇ ದಿನದ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್ ಹಿನ್ನೆಲೆ ಗಾಯಕ ನವೀನ್ ಸಜ್ಜು ಹಾಡಿಗೆ ಕಾರ್ಯಕ್ರಮದ ಆಯೋಜಕರಾದ ಸೂರಜ್ ನಾಯ್ಕ ಸೋನಿ, ಧೀರೂ ಶಾನಭಾಗ ಹಾಗೂ ಹಲವು ಗಣ್ಯರು ಕುಣಿದು ಕುಪ್ಪಳಿಸಿದ್ದಾರೆ.
ನವೀನ್ ಸಜ್ಜು ವೇದಿಕೆ ಮೇಲೇರಿ ಹಾಡುತ್ತಿದ್ದಂತೆ ಕುಮಟಾ ಮಂದಿ ಹುಚ್ಚೆದ್ದು ಕುಣಿದರು. ಗಣ್ಯರಾದ ಸಂಪತಕುಮಾರ ನೈರಿ, ಪೊನ್ನಪ್ಪ ನಾಯ್ಕ, ಜಗದೀಶ್ ನಾಯಕ ಕೂಡ ಡ್ಯಾನ್ಸ್ ಮಾಡುವ ಮೂಲಕ ಆನಂದಿಸಿದರು.
ಇದೇ ವೇಳೆ ಮಾತನಾಡಿದ ನವೀನ್ ಸಜ್ಜು, ‘ದೊಡ್ಮನೆ ದೊರೆಯೇ’ ಹಾಡನ್ನು ಮಾಡುವಾಗ ಬಹಳ ಸಂಕಟವಾಯಿತು. ಇಂತಹ ಒಬ್ಬ ವ್ಯಕ್ತಿಗೆ ಈ ರೀತಿಯ ಹಾಡನ್ನು ಮಾಡಬೇಕಾಯಿತಲ್ಲ ಎನಿಸಿತು. ಕೋಟ್ಯಂತರ ಅಭಿಮಾನಿಗಳ ಧ್ವನಿಯಾಗಿ ಈ ಹಾಡನ್ನು ಹಾಡಿದ್ದೇನೆ. ಅಪ್ಪು ಅಜರಾಮರ ಎಂದರು.