ಶಿರಸಿ: ಕರ್ನಾಟಕದ ತಿರುಪತಿ ಶ್ರೀ ಕ್ಷೇತ್ರ ಮಂಜುಗುಣಿಯ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ರಥಾರೂಢನಾದ ಶ್ರೀ ವೆಂಕಟರಮಣನ ದರ್ಶನ ಪಡೆದು ಭಕ್ತರು ಪುನೀತರಾದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತ ಸಮೂಹ ಶ್ರೀದೇವರ ರಥೋತ್ಸವ ದಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು.
ಬೆಳಗ್ಗೆ ೬ ಗಂಟೆಯಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿತು. ಬಳಿಕ ಶ್ರೀದೇವಿ ಭೂದೇವಿ ಸಹಿತ ಶ್ರೀ ವೇಂಕಟರಮಣ ದೇವರ ಉತ್ಸವ ಮೂರ್ತಿಯನ್ನ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು. 8 ಗಂಟೆಗೆ ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಮಂಗಳವಾದ್ಯಗಳೊಂದಿಗೆ ವೈಭವೋಪೇತ ಮಹಾರಥೋತ್ಸವ ಜರುಗಿತು. ಆಗಮಿಸಿದ ಭಕ್ತಾದಿಗಳು ಗೋವಿಂದನ ನಾಮ ಸ್ಮರಣೆ ಯೊಂದಿಗೆ ರಥವನ್ನು ಎಳೆದು ಪುನೀತರಾದರು. ಬಳಿಕ ರಥಾರೂಢನಾದ ಶ್ರೀ ವೆಂಕಟರಮಣನ ದರ್ಶನ ಪಡೆದರು. ಹಣ್ಣು ಕಾಯಿ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಜೈಕಾರದೊಂದಿಗೆ ರಥಕ್ಕೆ ಕಡಲೆ,ಬಾಳೆಹಣ್ಣು ಎಸೆದರು.
ಇನ್ನು ರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಉಪಹಾರ, ಪಾನೀಯ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆಯ ವ್ಯವಸ್ತೆ ಕಲ್ಪಿಸಲಾಗಿತ್ತು. ದೂರದೂರುಗಳಿಂದ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ಬಸ್ ಸೌಲಭ್ಯ ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿತ್ತು.