ಕಾರವಾರ: ದೇವಸ್ಥಾನದ ಬಾಗಿಲು ಒಡೆದು ದೇವಿಯ ಚಿನ್ನಾಭರಣಗಳನ್ನು ಕದ್ದೊಯ್ದಿದ್ದ ಈರ್ವರನ್ನು ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದು, ಇನ್ನೋರ್ವನಿಗಾಗಿ ತೀವ್ರ ಶೋಧ ಮುಂದುವರಿದಿದೆ.
ಚೆಂಡಿಯಾದ ನವಚೆಂಡಿಕಾ ದೇವಿ ದೇವಸ್ಥಾನದ ಪಕ್ಕದ ಬಾಗಿಲನ್ನು ಒಡೆದು ದೇವಸ್ಥಾನದ ಒಳಗೆ ಪ್ರವೇಶಿಸಿದ್ದ ಯಾರೋ ಕಳ್ಳರು, ಒಳಗಡೆಯಿದ್ದ ದೇವಿಯ ಬೆಳ್ಳಿ, ಬಂಗಾರದ ಆಭರಣಗಳು ಮತ್ತು ನಗದು ಸೇರಿ 3.77 ಲಕ್ಷ ಮೌಲ್ಯದ ಸ್ವತ್ತು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರ ಪತ್ತೆಗಾಗಿ ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‍ಪಿ ವ್ಯಾಲೇಂಟೆನ್ ಡಿಸೋಜಾ ಅವರ ಸೂಚನೆ ಮೇರೆಗೆ ಮೂರು ತಂಡ ರಚನೆ ಮಾಡಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತಾರದ ಒಂದು ತಂಡ ರಾಜ್ಯಸ್ಥಾನಕ್ಕೆ, ಮತ್ತೊಂದು ತಂಡ ಗುಜರಾತ್‍ಗೆ ತೆರಳಿ ಆರೋಪಿತರ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ, ಆರೋಪಿತರಾದ ರಾಜಸ್ಥಾನದ ಪ್ರವೀಣ ಸಿಂಗ್, ಗುಜರಾತ್‍ನ ಸುರೇಶಕುಮಾರನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿತರು ತಾವು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಅವರಿಂದ ದೇವಸ್ಥಾನ ಕಳ್ಳತನದ ಆಭರಣ, ಬೆಳ್ಳಯ ಗಟ್ಟಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಹುಂಡೈ ಕಾರು ಹಾಗೂ ಹೊಂಡಾ ಆ್ಯಕ್ಟೀವಾ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮೌಲ್ಯ 4.32 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಮತ್ತೊಬ್ಬ ಆರೋಪಿ ರಾಜಸ್ಥಾನದ ಧಮೇರ್ಂದ್ರ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರೆದಿದೆ. ದಸ್ತಗಿರಿ ಮಾಡಿದ ಆರೋಪಿತರಿಗೆ ನ್ಯಾಯಲಯಕ್ಕೆ ಹಾಜರುಪಡಿಸಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಆರೋಪಿತರ ಮೇಲೆ ಕರ್ನಾಟಕ, ರಾಜಸ್ಥಾನ, ಗುಜರಾತ ಮುಂತಾದ ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಾಲಾಗಿವೆ ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆಯಲ್ಲಿ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕರು, ಪಿ.ಎಸ್.ಐ (ತನಿಖೆ), ಅಂಕೋಲಾ ಪಿ.ಎಸ್.ಐ (ತನಿಖೆ), ಟೆಕ್ನಿಕಲ್ ಸೆಲ್, ಪ್ರೊಬೆಷನರಿ ಪಿಎಸ್‍ಐ, ಗ್ರಾಮಿಣ ಪೊಲೀಸ್ ಠಾಣೆ, ಮಹಿಳಾ ಠಾಣೆ ಹಾಗೂ ಅಂಕೋಲಾ ಠಾಣೆಯ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದರು. ಆರೋಪಿತರನ್ನು ಪ್ರಕರಣ ದಾಖಲಾಗಿ ಒಂದು ವಾರದ ಒಳಗೆ ಬಂಧಿಸುವಲ್ಲಿ ಯಶಸ್ಸು ಸಾಧಿಸಿದ ತಂಡಕ್ಕೆ ಎಸ್‍ಪಿ ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.