ಅಂಕೋಲಾ: ಅತಿಕ್ರಮಣ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ರೈತರಿಗೆ ವಿದ್ಯುತ್ ಸಂಪರ್ಕ ನೀಡುವ ಯೋಜನೆ ಸರಕಾರದ ಮಟ್ಟದಲ್ಲಿದ್ದು, ಸದ್ಯದಲ್ಲಿಯೇ ಯೋಜನೆ ಪ್ರಕಟಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಜಿಲ್ಲೆಯ ಮಲೆನಾಡು ಹಾಗು ಕರಾವಳಿ ಪ್ರದೇಶಗಳು ಅನುದಾನ ಹಂಚಿಕೆಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿವೆ. ಸಚಿವರಾಗಿ ಅತ್ಯುತ್ತಮ ಕಾರ್ಯನಿರ್ವಹಿಸಿ ಜನಾನುರಾಗಿ ಎನಿಸಿರುವ ಸಚಿವ ಅಶೋಕ್ ಜಿಲ್ಲೆಯ ಎಲ್ಲ ಕಂದಾಯ ಇಲಾಖೆಯ ಸಮಸ್ಯೆಯನ್ನು ನಿವಾರಿಸಿಕೊಡಬೇಕು ಎಂದು ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಜಿಲ್ಲೆಯಲ್ಲಿ 81,000 ಕ್ಕೂ ಅಧಿಕರು ಅರಣ್ಯ ಒತ್ತುವರಿ ಮಾಡಿಕೊಂಡಿದ್ದು, 35 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆ ಎಲ್ಲ ಹಕ್ಕುದಾರರಿಗೆ ಹಕ್ಕುಪತ್ರ ನೀಡಿ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಡಬೇಕು. ಹಂಗಾಮಿ ಲಾಗಡಿ ಸಮಸ್ಯೆ, ವಿದ್ಯುತ್ ಸಮಸ್ಯೆ, ಫಾರ್ಮ್ ನಂಬರ್ 3 ಮತ್ತು ಇ-ಸ್ವತ್ತು ಸಮಸ್ಯೆಯನ್ನು ಬಗೆಹರಿಸಿಕೊಡಬೇಕಾಗಿ ಸಚಿವ ಹೆಬ್ಬಾರ್ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಶಾಸಕ ದಿನಕರ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.