ಅಂಕೋಲಾ: ತಾಲೂಕಿನ ಅಂಗಡಿಬೈಲಿನ ಬುಡಕಟ್ಟು ಸಿದ್ದಿ ಜನಾಂಗದ ಸುಬ್ರಾಯ ಹಸನ್ ಸಿದ್ದಿ ಮನೆಗೆ ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಗ್ರಾಮೀಣ ಪರಿಸರದ ಸೊಗಡನ್ನು ಸವಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ವಿ ಎಸ್ ಪಾಟೀಲ್, ಶಾಂತಾರಾಮ ಸಿದ್ದಿ ಸೇರಿದಂತೆ ಪ್ರಮುಖರೊಂದಿಗೆ ಭೇಟಿ ನೀಡಿದ ಸಚಿವ ಅಶೋಕ್, ಸಿದ್ದಿ ಜನಾಂಗದ ಕೃಷಿ ಕಾಯಕವನ್ನು ವೀಕ್ಷಿಸಿ ಜೇನು ಸಾಕಾಣಿಕೆ, ಅಡಿಕೆ ಸುಲಿಯುವುದು, ಆಲೆಮನೆಯಲ್ಲಿ ಬೆಲ್ಲ ತಯಾರಿಸುವುದನ್ನು ನೋಡಿದರು.
ಈ ವೇಳೆ ಮಾತನಾಡಿದ ಸಚಿವ ಅಶೋಕ್, ಸಿದ್ಧಿ ಜನಾಂಗದ ಜನರೂ ಸಹ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಆ ಹಿನ್ನಲೆಯಲ್ಲಿ ಸಿದ್ದಿ ಜನಾಂಗದ ಓರ್ವ ಮಹಿಳೆಗೆ ಗ್ರಾಮ ಸಹಾಯಕ ಹುದ್ದೆಯನ್ನು ಘೋಷಿಸಿದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗು ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಜನಪರ ಕಾರ್ಯವನ್ನು ಮಾಡುತ್ತಿದೆ. ಭೇಟಿ ನೀಡಿದ ಸ್ಥಳದಲ್ಲಿಯೇ ಸಿದ್ದಿ ಜನಾಂಗದ ಪ್ರತಿಭೆಗೆ ಗ್ರಾಮ ಸಹಾಯಕ ಹುದ್ದೆಯನ್ನು ಘೋಷಿಸಿದ್ದನ್ನು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಮಾತನಾಡಿ, ಸಿದ್ದಿ ಜನಾಂಗವು ಬುಡಕಟ್ಟು ಸಮಾಜವಾಗಿದ್ದು, ಈ ಸಮಾಜದ ಜನರ ವಿವಿಧ ಸಮಸ್ಯೆಯನ್ನು ಪರಿಹರಿಸಲು ಆಗ್ರಹಿಸಿದರು.
ಇದೇ ವೇಳೆ ಸಿದ್ದಿ ಸಮುದಾಯದ ಈರ್ವರು ಪ್ರತಿಭಾವಂತರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.