ಅಂಕೋಲಾ: ಜಿಲ್ಲೆಯಲ್ಲಿ ಹೊಸದಾಗಿ 23 ಕಂದಾಯ ಗ್ರಾಮಗಳನ್ನು ಮಾಡಲಾಗುತ್ತಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತದ ಕುಂಟಗಣಿಯಲ್ಲಿ ಶುಕ್ರವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಹಾಗು ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿವರ್ಷ ಬಡವರಿಗೋಸ್ಕರ 10,000 ಕೋಟಿಗಳಷ್ಟನ್ನು ರಾಜ್ಯ, ಕೇಂದ್ರ ಸರಕಾರ ಜೊತೆಗೂಡಿ ಅನುದಾನ ನೀಡಲಾಗುತ್ತಿದೆ ಎಂದರು.
ಪೆನ್ಷನ್ ಕಾರಣಕ್ಕೆ ಇಲಾಖೆಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹಲೋ ಹೇಳಿದರೆ ಮನೆ ಬಾಗಿಲಿಗೆ ಪೆನ್ಷನ್ ಬರುತ್ತದೆ. ನಾಲ್ಕು ಸಂಖ್ಯೆಯ ಟೋಲ್ ನಂಬರ್ ಮೂಲಕ ಹಲೋ ಕಂದಾಯ ಸಚಿವರೇ ಎಂದರೆ ಸಾಕು, ನಿಮ್ಮ ಮಾಹಿತಿ ನೀಡಿದರೆ ನಿಮ್ಮ ಮನೆ ಬಾಗಿಲಿಗೆ 72 ಘಂಟೆಯಲ್ಲಿ ಪೆನ್ಷನ್ ಸರ್ಟಿಫಿಕೇಟ್ ಬರುತ್ತದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಜನರೆಡೆಗೆ ಸರ್ಕಾರ ಬರಬೇಕಿತ್ತು. ಆದರೆ ಹಾಗಾಗುತ್ತಿರಲಿಲ್ಲ. ಈ ಗ್ರಾಮ ವಾಸ್ತವ್ಯದ ಕಲ್ಪನೆ ಮೂಲಕ ಜನರೆಡೆಗೆ ಸರಕಾರ ಬಂದಿದೆ. ಜೊತೆಗೆ ತಾನು ವಾಸ್ತವ್ಯ ಮಾಡಿರುವ ಗ್ರಾಮಕ್ಕೆ 1 ಕೋಟಿ ಅನುದಾನ ನೀಡುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ 50 ಲಕ್ಷ ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆ ದಾಖಲೆಗಳನ್ನು ನೀಡಲಾಗಿದೆ. ಗ್ರಾಮ ವಾಸ್ತವ್ಯದ ಮೂಲಕ ಜನರ ಮನೆ ಬಾಗಿಲಿಗೆ ಬಿಜೆಪಿ ಸರಕಾರ ಬರುತ್ತಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ತಿಂಗಳದ ಪ್ರತಿ ಮೂರನೇ ಶನಿವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರರು ಸೇರಿದಂತೆ ಒಟ್ಟು 250 ಕಡೆಗಳಲ್ಲಿ ಗ್ರಾಮ ವಾಸ್ತವ್ಯ ನಡೆಯುತ್ತಿದೆ. ಒಟ್ಟು 99,171 ಅರ್ಜಿ ಗ್ರಾಮ ವಾಸ್ತವ್ಯದಿಂದ ಬಂದಿದೆ. ಅದರಲ್ಲಿ 82,000ರಕ್ಕೂ ಅಧಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.
ಉತ್ತರ ಕನ್ನಡಕ್ಕೆ ಸಂಬಂಧಿಸಿ ಮುಂದಿನ ಒಂದು ತಿಂಗಳೊಳಗೆ ಇ-ಸ್ವತ್ತು ಸಮಸ್ಯೆಗೆ ಮುಕ್ತಿ ಕೊಡಲಾಗುತ್ತದೆ. ಕೊವಿಡ್ ಸಂದರ್ಭ, ಮಳೆಹಾನಿಗೆ 11.99 ಕೋಟಿ, ಕೊವಿಡ್ ಮೃತರಾದವರಿಗೆ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರತಿವರ್ಷ ಉತ್ತರ ಕನ್ನಡ ಜಿಲ್ಲೆಗೆ 180 ಕೋಟಿ ಪೆನ್ಷನ್ ಮೂಲಕ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಶಾಂತಾರಾಮ ಸಿದ್ದಿ ಇದ್ದರು.