ಶಿರಸಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಸುಂಧರಾ ಸಮೂಹ ಸೇವಾ ಸಂಸ್ಥೆ ಯ ಪ್ರಾರಂಭೋತ್ಸವ, ಸನ್ಮಾನ ಉಪನ್ಯಾಸ ಮತ್ತು ಯಕ್ಷಗಾನ ಕಲಾ ಪ್ರದರ್ಶನ ಏ.17ರಂದು ಏರ್ಪಾಟಾಗಿದೆ.
ಸಾಂಸ್ಕೃತಿಕ ಕಲಾ ಚಟುವಟಿಕೆಗಳು, ಜ್ಞಾನ ಪ್ರಸಾರ, ಮಾಹಿತಿ ತರಬೇತಿ ಕಾರ್ಯಕ್ರಮಗಳು, ಸಾಧಕರು ಹಾಗೂ ಪ್ರತಿಭೆಗಳಿಗೆ ಪುರಸ್ಕಾರ ಮುಂತಾದ ಉದ್ದೇಶಗಳೊಂದಿಗೆ ವಸುಂಧರಾ ಸಂಸ್ಥೆ ಕಾರ್ಯನಿರ್ವಹಿಸಲಿದೆ.
ಕ್ರಿಯಾಶೀಲ ಸಂಘಟಕ, ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿ, ಯಕ್ಷಗಾನ ಕಲಾವಿದ ಆರ್ ಟಿ ಭಟ್ಟ ಕಂಚಿಕೈ ನೇತೃತ್ವದಲ್ಲಿ ಸಮಾನ ಮನಸ್ಕರು ಸೇರಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
ಕಂಚಿಕೈ ಬಯಲು ರಂಗಮಂದಿರದಲ್ಲಿ ಏ.17ರ ಸಂಜೆ 5. 30ಕ್ಕೆ ವಸುಂಧರಾ ಸಂಸ್ಥೆಯ ಪ್ರಾರಂಭೋತ್ಸವ ನಡೆಯಲಿದ್ದು ರಾಜ್ಯ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ, ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಸ್ಥಳೀಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ಹೆಗಡೆ, ಗ್ರಾಪಂ ಸದಸ್ಯ ರಾಘವೇಂದ್ರ ಹೆಗಡೆ ಅತಿಥಿಯಾಗಿ ಪಾಲ್ಗೊಳ್ಳುವರು. ಗ್ರಾಪಂ ಅಧ್ಯಕ್ಷ ರಾಜಾರಾಮ ಹೆಗಡೆ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಕಂಚೀಕೈ ವಿರೂಪಾಕ್ಷ ಹೆಗಡೆ ಮತ್ತು ನಾಟಿವೈದ್ಯ ಮಂಜುನಾಥ ಸುಬ್ಬ ಗೌಡ ಅವರನ್ನು ಸನ್ಮಾನಿಸಲಾಗುತ್ತಿದೆ.
ಸಾಗರದ ಪ್ರಜ್ಞಾ ಭಾರತಿ ವಿದ್ಯಾಮಂದಿರದ ಅಧ್ಯಾಪಕ ವಿ. ಗಜಾನನ ಭಟ್ಟ ರೇವಣಕಟ್ಟಾ ಅವರು ಭಾರತೀಯ ಸಂಸ್ಕೃತಿ ವಿಷಯವಾಗಿ ಉಪನ್ಯಾಸ ನೀಡುವರು.
ನಂತರ ಯಕ್ಷಗಾನ ಕಲಾ ಪ್ರದರ್ಶನ ನಡೆಯಲಿದೆ. ಭಸ್ಮಾಸುರ ಮೋಹಿನಿ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಲೆ ವಾದಕರಾಗಿ ಪರಮೇಶ್ವರ ಭಂಡಾರಿ, ಚಂಡೆ ವಾದಕರಾಗಿ ವಿಘ್ನೇಶ್ವರ ಕೆಸರಕೊಪ್ಪ ಪಾಲ್ಗೊಳ್ಳುವರು.
ಮುಮ್ಮೇಳದಲ್ಲಿ ಶಂಕರ ಹೆಗಡೆ ನೀಲಕೋಡ, ನರಸಿಂಹ ಚಿಟ್ಟಾಣಿ, ಉದಯ ಹೆಗಡೆ ಕಡಬಾಳ, ಗಣಪತಿ ಭಟ್ಟ ಮುದ್ದಿನಪಾಲ, ಮಂಜುನಾಥಗೌಡ, ಕಾರ್ತಿಕ ಕಣ್ಣಿ, ವೆಂಕಟರಮಣ ಹೆಗಡೆ ಮಾದನಕಳ್ ವಿವಿಧ ಪಾತ್ರ ಅಭಿನಯಿಸುವರು.
ಕಂಚಿಕೈ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಕಲಾಸಕ್ತರು ಪಾಲ್ಗೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.