ಹೊನ್ನಾವರ: ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾವಿರಾರು ಜಾತಿ, ಹತ್ತಾರು ಧರ್ಮಗಳು, ಅನೇಕ ಭಾಷೆಗಳ ನಡುವೆಯೂ ನಾವು ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಶಾಂತಿ ಮತ್ತು ಸ್ನೇಹದಿಂದ ಬದುಕುತ್ತಿದ್ದರೆ ಅದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಭಾರತಕ್ಕೆ ನೀಡಿದ ಸಂವಿಧಾನದ ಮೂಲಕ ಎನ್ನುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಹೇಳಿದರು.
ಇಂತಹ ಮಹಾನ್ ಚಿಂತಕನ ತತ್ವ, ಆದರ್ಶಗಳು ಈ ಜಗತ್ತಿನಲ್ಲಿ ಸೂರ್ಯ, ಚಂದ್ರನಿರುವವರೆಗೂ ಶಾಶ್ವತವಾಗಿರಲಿ ಎಂದು ಹಾರೈಸಿ, ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲ ಉದ್ದೇಶವನ್ನು ಇಂದಿನ ಯುವಕರು, ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳುವಂತೆ ಕರೆನೀಡಿದರು.
ಅವರು ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಏರ್ಪಡಿಸಿದ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಮಹಾನ್ ಮಾನವತಾವಾದಿಗಳಾಗಿದ್ದರು. ಅವರು ರಚಿಸಿದ ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದ್ದು, ಡಾ.ಅಂಬೇಡ್ಕರ್ ಅವರ ತತ್ವ, ಆದರ್ಶ, ಚಿಂತನೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿ ನಿಂತಿದೆ ಎಂದರು.
ಕಾರ್ಯಕ್ರಮದಲ್ಲಿ ಸೇರಿದ ಪಕ್ಷದ ಎಲ್ಲಾ ಕಾರ್ಯಕರ್ತರು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಭೆಯಲ್ಲಿ ಕಾಂಗ್ರೇಸ್ ಇಂಟಕ ಅಧ್ಯಕ್ಷ ಆಗ್ನೆಲ್ ಡಯಾಸ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಝಕ್ರಿಯ್ಯಾ ಸಾಬ್, ಮಾದೇವ ನಾಯ್ಕ ಕರ್ಕಿ, ಸಾಲ್ವೋದರ ಡಿ’ಸೋಜಾ, ಬ್ರಾಜಿಲ್ ಪಿಂಟೊ, ಚಂದ್ರಶೇಖರ ಚಾರೋಡಿ, ಉದಯ ಮೇಸ್ತ, ನೆಲ್ಸನ್ ರೊಡ್ರಿಗಿಸ್, ಜೋಸೆಪ್ ಡಿಸೋಜಾ, ಹನಿಫ್ ಶೇಖ್, ಮೋಹನ ಮೇಸ್ತ,ಸುರೇಶ ಮೇಸ್ತ, ಮುಸ್ತಫಾ ಸಾಬ್, ಹರ್ಷ ಮಂಜಾ ಚಂದ್ರಾಣಿ, ಮದನರಾಜ್, ಮನ್ಸೂರ್ ಶೇಖ್ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ ಎಲ್ಲರನ್ನು ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ ಮೇಸ್ತ ವಂದಿಸಿದರು.