ಸಿದ್ದಾಪುರ: ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದರೊಂದಿಗೆ ಅವರನ್ನು ಸಂಸ್ಕಾರವಂತರನ್ನಾಗಿ ಮಾಡುವ ಜವಾಬ್ದಾರಿ ಪಾಲಕರದ್ದಾಗಿದೆ. ಹಾಗೆಯೇ ಪಠ್ಯ ವಿಷಯದ ಜತೆಗೆ ಪಠ್ಯೇತರ ವಿಷಯದಲ್ಲಿಯೂ ಮಕ್ಕಳು ಪಾಲ್ಗೊಳ್ಳುವ ಹಾಗೆ ಮಾಡಬೇಕು ಎಂದು ಜಿಪಂ ಮಾಜಿ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹುತ್ಗಾರ ಸಕಿಪ್ರಾ ಶಾಲೆಯಲ್ಲಿ ಭೂತೇಶ್ವರ ಗೆಳೆಯರ ಬಳಗ ಹುತ್ಗಾರ, ಕಲ್ಲಬ್ಬೆ, ಭಂಡಾರಿಕೇರಿ ಇವರು ಆಯೋಜಿಸಿದ್ದ ಹುತ್ಗಾರ ಸಕಿಪ್ರಾ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು. ಮೊಬೈಲ್, ದೂರದರ್ಶನದಿಂದ ಮಕ್ಕಳನ್ನು ದೂರ ಇಟ್ಟು ಅವರಿಗೆ ನೈತಿಕ ಶಿಕ್ಷಣವನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಹಾರ್ಸಿಕಟ್ಟಾ ಗ್ರಾಪಂ ಸದಸ್ಯ ಅನಂತ ಹೆಗಡೆ ಹೊಸಗದ್ದೆ ಊರಿನಲ್ಲಿ ಸಂಘಟನೆ ಇದ್ದರೆ ಎಂತಹ ಕೆಲಸವನ್ನು ಮಾಡಬಹುದು ಎನ್ನುವುದಕ್ಕೆ ಹುತ್ಗಾರ ಊರಿನ ಕಾರ್ಯಕ್ರಮ ನೋಡಿದರೆ ಕಂಡುಬರುತ್ತದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶ ನಾಯ್ಕ, ತಾಪಂ ಮಾಜಿ ಸದಸ್ಯ ಪ್ರಸನ್ನ ಹೆಗಡೆ ನಿರಗಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಅಶೋಕ ಹೆಗಡೆ ಹಿರೇಕೈ, ಗ್ರಾಪಂ ಮಾಜಿ ಅಧ್ಯಕ್ಷ ಡಾ.ರವಿ ಹೆಗಡೆ ಹೊಂಡಗಾಸಿಗೆ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಸೋವಿನಕೊಪ್ಪ ಗ್ರಾಪಂ ಅಧ್ಯಕ್ಷ ಮೋಹನ ಗೌಡ ಕಿಲವಳ್ಳಿ, ಊರಿನ ಹಿರಿಯರಾದ ಮಹಾಬಲ ಗೌಡ ಇತರರಿದ್ದರು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಹಾರ್ಸಿಕಟ್ಟಾ ಪ್ರಥಮ,ಶಿರಸಿ ದೇವನಳ್ಳಿ ದ್ವಿತೀಯ,ಕುಮಟಾ ಹಟ್ಟಿಕೇರಿ ತಂಡ ತೃತೀಯ ಹಾಗೂ ಸೂರ್ಯ ಪ್ರೆಂಡ್ಸ್ ನಾಲ್ಕನೆ ಸ್ಥಾನ ಪಡೆದುಕೊಂಡಿದೆ.
ಶಿಕ್ಷಕ ಶ್ರೀರಾಮ ಹೆಗಡೆ, ಅರವಿಂದ ಕಾರ್ಯಕ್ರಮ ನಿರ್ವಹಿಸಿದರು.