
ಮುಂಡಗೋಡ: ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ್ ವಡೇರ ಸ್ವಾಮೀಜಿಯವರು ಹರಿಪಾದ ಸೇರಿದ್ದರಿಂದ ತಾಲೂಕಾ ಜಿ.ಎಸ್.ಬಿ ಸಮಾಜದವರು ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಪೂಜೆ, ಭಜನೆ ಹಾಗೂ ಮೌನಾಚರಣೆ ಮಾಡುವುದರ ಮೂಲಕ ಭಕ್ತಿ ಪೂರ್ವ ಶ್ರದ್ಧಾಂಜಲಿ ಅರ್ಪಿಸಿದರು.
ನಮ್ಮ ಸಮಾಜದ ಮಾರ್ಗದರ್ಶಿಗಳು ಆಗಿದ್ದ ಅವರು ನಾವು ಪಟ್ಟಣದಲ್ಲಿ ಮಹಾಗಣಪತಿ ದೇವಾಲಯವನ್ನು ನಿರ್ಮಾಣಮಾಡಲು ನಮ್ಮ ಸಮಾಜದವರು ಎಲ್ಲರು ಸೇರಿ ಅವರ ಬಳಿ ಹೋಗಿದ್ದಾಗ ನಮಗೆಲ್ಲಾ ತಿಳುವಳಿಕೆ ನೀಡಿ 1983ರಲ್ಲಿ ಪ್ರಥಮ ಬಾರಿಗೆ ನಮ್ಮ ಪಟ್ಟಣಕ್ಕೆ ಬಂದು ದೇವಸ್ಥಾನದ ಅಡಿಗಲ್ಲು ಸಮಾರಂಭ ನೇರವೇರಿಸಿ ಕೊಟ್ಟರು. ಹಾಗೂ 1993 ರಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮಾಡಿ ಇಲ್ಲಿಯೆ ಮೂರು ದಿನಗಳ ಕಾಲ ಉಳಿದು ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟಿದ್ದರು. 1997 ರಲ್ಲಿಯು ಕೂಡ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂದು ಕೂಡ ಮೂರು ದಿನ ಉಳಿದಿದ್ದರು. ನಮ್ಮ ಯಾವುದೆ ಸಮಸ್ಯ ಹಾಗೂ ನಮ್ಮ ಸಮಾಜದ ಆಗು-ಹೋಗುಗಳಿಗೆ ಅವರ ಬಳಿ ಮಾರ್ಗದರ್ಶನ ಪಡೆಯುತ್ತಿದ್ದೆವು. ಶ್ರೀಗಳನ್ನು ಕಳೆದುಕೊಂಡು ನಮ್ಮ ಸಮಾಜಕ್ಕೆ ಆಘಾತವಾಗಿದೆ ಎಂದು ತಾಲೂಕಿನ ಜಿ.ಎಸ್.ಬಿ ಸಮಾಜದ ಮುಖಂಡ ಡಿ.ಎಸ್ ಮಹಾಲೆ ಹೇಳಿದರು.
ಸಮಾಜದ ಬಾಂಧವರು ತಮ್ಮ ವ್ಯಾಪಾರ ವ್ಯವಹಾರ ಬಂದ್ ಮಾಡಿ ಸ್ವಾಮಿಗಳಿಗೆ ಗೌರವ ಸಲ್ಲಿಸಿದರು.ಈ ಸಂದಭದಲ್ಲಿ ಆರ್.ವಿ.ಪಾಲೇಕರ, ಜಿ.ವಿ.ಪ್ರಭು, ಪ್ರಕಾಶ ಪ್ರಭು, ಸುರೇಶ ದೇಸಾಯಿ, ಗುರು ಕಾಮತ, ಹರೀಶ ಮಹಾಲೆ, ಅರುಣ ಮೂತಿಬೆಟಕರ, ಸಿತಾರಾಮ ಭಟ್ಟ, ಹಾಗೂ ಸಮಾಜದ ಬಾಂದವರು ಭಕ್ತ ವೃಂದದವರು ಹಾಜರಿದ್ದರು.