ಯಲ್ಲಾಪುರ: ಕಳೆದ ಎರಡು ವರ್ಷಗಳಿಂದ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಸರಿಯಾಗಿ ನಡೆಯದೇ ಇರುವುದರಿಂದ, ಮಕ್ಕಳ ಮಾನಸಿಕ ಸಾಮರ್ಥ್ಯ, ಕ್ಷಮತೆಯನ್ನು ಹೆಚ್ಚಿಸಲು ಬೇಸಿಗೆ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.
ಅವರು ಪಟ್ಟಣದ ಮಾದರಿ ಶಾಲೆಯ ಆವಾರದಲ್ಲಿ ರಂಗ ಸಹ್ಯಾದ್ರಿ, ಸಂಸ್ಕಾರ ಶಿಕ್ಷಣ ಸೇವಾ ಪ್ರತಿಷ್ಠಾನ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ಪರಸ್ಪರ ಬೆರೆತು ಕೌಶಲ್ಯಗಳನ್ನು ರೂಢಿಸಿಕೊಳ್ಳಲು, ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಲು, ಸಮಾಜದೊಂದಿಗೆ ಬೆರೆತು ಬದುಕುವನ್ನು ಕಲಿಸಲು ಇಂತಹ ಶಿಬಿರಗಳು ಸಹಕಾರಿ ಎಂದರು.
ರಂಗಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಶಿಬಿರವನ್ನು ನಡೆಸಲಾಗುತ್ತಿದೆ. ಸಂಸ್ಕಾರ, ಉತ್ತಮ ನಡವಳಿಕೆಯನ್ನು ಮಕ್ಕಳಿಗೆ ಕಲಿಸುವ ಉದ್ದೇಶ ನಮ್ಮದು ಎಂದರು.
ಶಿಕ್ಷಣ ಸಂಯೋಜಕ ಷಣ್ಮುಖ ಹೆಗಡೆ, ಶಾಲೆಯ ಮುಖ್ಯಾಧ್ಯಾಪಕ ಜಗದೀಶ ನಾಯ್ಕರ್, ಸಂಸ್ಕಾರ ಶಿಕ್ಷಣ ಸೇವಾ ಪ್ರತಿಷ್ಠಾನದ ಸುಬ್ರಾಯ ಭಟ್ಟ, ಕರಾಟೆ ಶಿಕ್ಷಕ ಪರಮೇಶ್ವರ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ನಾಯ್ಕ, ವರ್ತಕ ಪ್ರಕಾಶ ಶೇಟ್, ಪ್ರಕಾಶ ಕಟ್ಟಿಮನಿ ಇತರರಿದ್ದರು. ದಿವಾಕರ ಮರಾಠಿ, ಲಕ್ಷ್ಮೀ ಶಂಕರ, ಸುಮಂಗಲಾ ಜೋಶಿ ನಿರ್ವಹಿಸಿದರು.