• Slide
  Slide
  Slide
  previous arrow
  next arrow
 • ಹಳೆಕೋಟೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠೆ:ಅಷ್ಟಬಂಧ, ಬ್ರಹ್ಮ ಕಲಶೋತ್ಸವಕ್ಕೆ ಚಾಲನೆ

  300x250 AD

  ಭಟ್ಕಳ: ಇಲ್ಲಿನ ಮಾವಳ್ಳಿ ಹೋಬಳಿಯ ಪುರಾತನ ಶಿರಾಲಿಯ ಸಾರದಹೊಳೆಯ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಬುಧವಾರದಂದು ನಾಮಧಾರಿ ಕುಲಗುರುಗಳಾದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪುರಪ್ರವೇಶದಿಂದಾಗಿ ಚಾಲನೆ ದೊರೆತಿದೆ.

  ಸುಮಾರು 490 ವರ್ಷಗಳ ಕಾಲ ಪುರಾತನವಾದ ಈ ದೇವಸ್ಥಾನ ಹತ್ತು ಹಲವು ಪವಾಡಗಳ ಕಾರಣೀಭೂತವಾಗಿ ಭಕ್ತರ ಸಂಕಲ್ಪಗಳನ್ನು ಈಡೇರಿಸುವ ಶಕ್ತಿ ಕೇಂದ್ರವಾಗಿದೆ. ನಾಮಧಾರಿಗಳ ಕುಲಗುರುಗಳಾದ ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ವೇದಮೂರ್ತಿ ಆಗಮ ಪ್ರವೀಣ ಶ್ರೀಲಕ್ಷ್ಮೀಪತಿ ಗೋಪಾಲಾಚಾರ್ಯ ಇವರ ಪೌರೋಹಿತ್ಯದಲ್ಲಿ ಶ್ರೀಪಾಂಚರಾತ್ರ ಆಗಮೋಕ್ತ ಸಪ್ತದಿನ ಸಂಕಲ್ಪ ಪೂರ್ವಕವಾಗಿ ನೆರವೇರಿಸಲು ಭಗವತ್ ಪ್ರೇರಣೆಯಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.

  ಹಳೆಕೋಟೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ಮೊದಲ ದಿನವಾದ ಬುಧವಾರದಂದು ಮಧ್ಯಾಹ್ನ 3.30ರ ಸುಮಾರಿಗೆ ಶಿರೂರಿನ ಟೋಲ್‍ಗೇಟ್‍ನ ಬಳಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭಟ್ಕಳ ಹಾಗೂ ಮಾವಳ್ಳಿ ಹೋಬಳಿಯ ನಾಮಧಾರಿ ಸಮಾಜದ ಅಧ್ಯಕ್ಷರು ಹಾಗೂ ಸಮಾಜದ ಜನರು ಮತ್ತು ಹಳೆಕೋಟೆ ದೇವಸ್ಥಾನದ ಮೊಕ್ತೇಸರರು ಸ್ವಾಗತಿಸಿ ಅಲ್ಲಿಂದ ಬೈಕ್ ರ್ಯಾಲಿ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೊರಟೆ, ಬೆಳಕೆ, ಸೋಡಿಗದ್ದೆ, ಸರ್ಪನಕಟ್ಟೆ, ಪುರವರ್ಗ, ಮೂಡಭಟ್ಕಳ, ಮಣ್ಕುಳಿ ಮಾರ್ಗವಾಗಿ ಸಾರದಹೊಳೆ ದೇಗುಲಕ್ಕೆ ತಲುಪಿತು. ಈ ವೇಳೆ ಸಂಶುದ್ದೀನ್ ಸರ್ಕಲ್ ಬಳಿ ಮುಸ್ಲಿಂ ಸಮುದಾಯದಿಂದ ಇನಾಯತ್ ಉಲ್ಲಾ ಶಾಬಂದ್ರಿ ಹಾಗೂ ಪ್ರಮುಖರು ಸ್ವಾಮೀಜಿಗಳಿಗೆ ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿ ವಂದಿಸಿದರು.

  ವೆಂಕಟಾಪುರದ ಸೇತುವೆಯಿಂದ ನಾಮಧಾರಿ ಸಮಾಜದ ಮಹಿಳೆಯರು, ಯುವತಿಯರು ಪೂರ್ಣಕುಂಭ ಸ್ವಾಗತ ಮಾಡಿ, ಅಲ್ಲಿಂದ ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನದ ತನಕ ಮೆರವಣಿಗೆಯ ಮೂಲಕ ಸಮಾಜದ ಜನರು ಸಾಗಿದರು. ವಿವಿಧ ಕಲಾ ತಂಡಗಳೊಂದಿಗೆ ಕಾಲ್ನಡಿಗೆಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಮೀಜಿಗಳನ್ನು ದೇವಸ್ಥಾನದಲ್ಲಿ ಬರಮಾಡಿಕೊಳ್ಳಲಾಯಿತು. ರ್ಯಾಲಿಯುದ್ದಕ್ಕೂ ಸಮಾಜದ ಯುವಕರು ಜೈ ಶ್ರೀರಾಮ ಜಯಘೋಷ ಕೂಗುತ್ತಾ ಸಾಗಿ ಬಂದಿದ್ದು, ಕೇಸರಿ ಬಾವುಟ ಎಲ್ಲೆಡೆ ರಾರಾಜಿಸುತ್ತಿತ್ತು. ರ್ಯಾಲಿಯಲ್ಲಿ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಕಾಸ್ಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

  300x250 AD

  ಈ ಸಂದರ್ಭದಲ್ಲಿ ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ಜೆ.ನಾಯ್ಕ, ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ, ಮಾವಳ್ಳಿ ನಾಮಧಾರಿ ಅಧ್ಯಕ್ಷ ಸುಬ್ರಾಯ ನಾಯ್ಕ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ನಾಮಧಾರಿ ಸಮಾಜದ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು. ರ್ಯಾಲಿಯುದ್ಧಕ್ಕೂ ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ, ಸಿಪಿಐ ದಿವಾಕರ್, ಮಹಾಬಲೇಶ್ವರ ನಾಯ್ಕ ನೇತ್ರತ್ವದಲ್ಲಿ ಪಿಎಸ್‍ಐಗಳು ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಹಾಗೂ ಸಂಚಾರ ವ್ಯವಸ್ಥೆ ನಿಯಂತ್ರಿಸಿದರು.

  ಗುರುಮಠದಿಂದ ಹೊರೆಕಾಣಿಕೆ ಸಲ್ಲಿಕೆ: ನಾಮಧಾರಿ ಸಮಾಜ ಭಟ್ಕಳದ ಗುರುಮಠ ಆಸರಕೇರಿಯ 18 ಕೂಟದಿಂದ ಸಾರದಹೊಳೆ ಶ್ರೀಹಳೆಕೋಟೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ನಿಮಿತ್ತ ಭಕ್ತರಿಂದ ವಿವಿಧ ರೂಪದ ಹೊರಕಾಣಿಕೆಯನ್ನು ಬುಧವಾರದಂದು ಗುರುಮಠ ಆಸರಕೇರಿ ಶ್ರೀತಿರುಮಲ ವೆಂಕಟರಮಣ ಸ್ವಾಮಿಗೆ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ ಮೂಲಕ 7 ಸರಕು ತುಂಬುವ ವಾಹನದಲ್ಲಿ ಹೊರೆಕಾಣಿಕೆಯನ್ನು ಹಳೆಕೋಟೆ ಹನುಮಂತ ದೇವಸ್ಥಾನಕ್ಕೆ ಒಪ್ಪಿಸಲಾಯಿತು.

  ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ; ದೇಗುಲದ ಧಾರ್ಮಿಕ ಕಾರ್ಯದ ವೇಳೆ ಹತ್ತಾರು ಸಾವಿರ ಜನ ಸೇರುವ ಕಾರಣ ಕಾರವಾದಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳದ ತಂಡ ಬಂದು ದೇವಾಲಯ ಒಳಾಂಗಣ, ಹೊರಾಂಗಣ, ಸ್ವಾಮೀಜಿಯವರು ಪೀಠ, ಹೊರೆ ಕಾಣಿಕೆ ನೀಡುವ ಸ್ಥಳ, ಕಾರ್ಯಕ್ರಮ ನಡೆಯುವ ಸ್ಥಳ ಊಟದ ಸ್ಥಳ, ವಾಹನ ಪಾಕಿರ್ಂಗ್ ಸ್ಥಳ ಸೇರಿದಂತೆ ಎಲ್ಲೆಡೆ ಪರಿಶೀಲನೆ ಮಾಡಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ತೀವ್ರ ನಿಗಾ ಇಡಲಾಗಿದೆ. ದೇವಸ್ಥಾನ ಆಡಳಿತ ಕಮಿಟಿ ಅಗತ್ಯವಿದ್ದ ಕಡೆ ಸಿಸಿ ಟಿವಿ ಕ್ಯಾಮೆರಾ ಕೂಡಾ ಅಳವಡಿಸಿ ನಿಗಾ ವಹಿಸಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top