ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿರುವ ಡಾ.ನಾಸೀರ್ ಅಹ್ಮದ್ ಜಂಗೂಭಾಯಿ ಅವರು ಕರ್ನಾಟಕ ರಾಜ್ಯ ಶಿಕ್ಷಕರ- ಉಪನ್ಯಾಸಕರ ಕ್ರಿಯಾ ಸಮಿತಿ ವತಿಯಿಂದ ಕೊಡುವ ‘ಶಿಕ್ಷಣ ಸಿರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡಾ.ನಾಸೀರ್ ಅಹ್ಮದ್ ಜಂಗೂಭಾಯಿಯವರು ಕಳೆದ 15 ವರ್ಷಗಳಿಂದ ಬೋಧನೆ, ಸಂಶೋಧನೆ ಮತ್ತು ಪಠ್ಯೆತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕೀರ್ಣ, ಸಮ್ಮೇಳನ, ಚರ್ಚೆಗಳಲ್ಲಿ ಭಾಗವಹಿಸಿ ಸಾಕಷ್ಟು ಗಮನ ಸೆಳೆದಿದ್ದರು. ರಾಜ್ಯಶಾಸ್ತ್ರ ವಿಭಾಗದಲ್ಲಿ ವಿವಿಧ ವಿಷಯಗಳ ಕುರಿತು ಶೈಕ್ಷಣಿಕವಾಗಿ ಪಠ್ಯಪುಸ್ತಕ ಮತ್ತು ನಿಯತಕಾಲಿಕೆಗಳಲ್ಲಿ ಅನೇಕ ಲೇಖನಗಳು ಪ್ರಕಟಗೊಂಡಿವೆ. ಡಾ.ನಾಸೀರ್ ಅಹ್ಮದ್ ಜಂಗೂಭಾಯಿ ಅವರು ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಎನ್.ಸಿ.ಸಿ ಘಟಕಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಅವರ ಶೈಕ್ಷಣಿಕ ಸಾಧನೆ ಹಾಗೂ ಸೇವೆಯನ್ನು ಗುರುತಿಸಿ ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿಯು ರಾಜ್ಯ ಮಟ್ಟದ ಶಿಕ್ಷಣ ಸಿರಿ ಪ್ರಶಸ್ತಿಯನ್ನು ಶಿರಸಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಮಾಡಿ ಗೌರವಿಸಿದೆ. ಪ್ರಶಸ್ತಿಯ ಗೌರವಕ್ಕೆ ಪಾತ್ರರಾದ ಡಾ.ನಾಸೀರ್ ಅಹ್ಮದ್ ಜಂಗೂಭಾಯಿಯವರನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ, ಕಾಲೇಜಿನ ಉಪನ್ಯಾಸಕವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.