ಕಾರವಾರ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಚಿವ ಈಶ್ವರಪ್ಪರವರ ಪ್ರಚೋದನೆಯೇ ಕಾರಣವಾಗಿರುವುದರಿಂದ ಕೂಡಲೇ ಸಚಿವ ಈಶ್ವರಪ್ಪರವರನ್ನು ಬಂಧಿಸಿ ವಿಚಾರಣೆ ಪ್ರಾರಂಭಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಆಗ್ರಹ ಪಡಿಸುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ಹೇಳಿದ್ದಾರೆ.
ಸಂತೋಷ ಪಾಟೀಲ್ ಅವರು ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದು, ಪಂಚಾಯತ್‍ರಾಜ್ ಇಲಾಖೆಯಲ್ಲಿ ಸುಮಾರು ನಾಲ್ಕು ಕೋಟಿ ಕಾಮಗಾರಿ ನಡೆಸಿದ್ದರು. ಆದರೆ ಸದರಿ ಕಾಮಗಾರಿ ಬಿಲ್ ಮಂಜೂರಿ ಮಾಡಲು ಸಚಿವ ಈಶ್ವರಪ್ಪರವರು ಶೇಕಡಾ 40ರಷ್ಟು ಕಮಿಷನ್ ಕೇಳಿ ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಸ್ವತಃ ಸಂತೋಷ್ ರವರು ದೇಶದ ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೆ ಪತ್ರ ಮುಖೇನ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಸರಕಾರದ 40% ಕಮಿಷನ್ ಕುರಿತು ರಾದ್ಧಾಂತ ನಡೆದು ವಿರೋಧ ಪಕ್ಷ ಸಚಿವ ಈಶ್ವರಪ್ಪರವರ ರಾಜೀನಾಮೆಗೆ ಒತ್ತಾಯ ಮಾಡಿತ್ತು. ಇದೀಗ ಮೃತ ಸಂತೋಷ್ ಪಾಟೀಲ್ ಸ್ವತಃ ಬರೆದಿರುವ ಮರಣ ಪತ್ರದಲ್ಲಿ ಸಚಿವ ಈಶ್ವರಪ್ಪನವರು ತನ್ನ ಸಾವಿಗೆ ಕಾರಣ ಎಂದು ಬರೆದಿರುವುದರಿಂದ, ಸಾವಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಐಪಿಸಿ ಕಾಲಂನಡಿ ಈಶ್ವರಪ್ಪರವರು ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರಕಾರ ಇದ್ದಾಗ ಡಿವೈಎಸ್‍ಪಿ ಗಣಪತಿ ಸಾವು ಪ್ರಕರಣದಲ್ಲಿ ಸಚಿವ ಜಾರ್ಜ್ ರಾಜೀನಾಮೆಗೆ ರಾಜ್ಯವ್ಯಾಪಿ ಹೋರಾಟ ಮಾಡಿದ್ದ ಬಿಜೆಪಿ ಇಂದು ಪಲಾಯನ ಸೂತ್ರ ಪಟಿಸುತಿರುವುದು ನಾಚಿಕೆಗೇಡು. ಆದ್ದರಿಂದ ಸ್ವತಃ ಸ್ವಪಕ್ಷೀಯರನ್ನೇ ಕಮಿಷನ್ ಕೊಡಲಿಲ್ಲ ಎಂದು ಹಿಂಸಿಸಿ ಇಂದು ಅವರ ಸಾವಿಗೆ ಕಾರಣರಾದ ಸಚಿವ ಈಶ್ವರಪ್ಪರವರನ್ನು ಕೂಡಲೇ ಬಂಧಿಸಿ ಪ್ರಕರಣವನ್ನು ನಿಷ್ಪಕ್ಷವಾಗಿ ತನಿಖೆ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸರಕಾರವನ್ನು ಒತ್ತಾಯ ಪಡಿಸುತ್ತಿದೆ ಎಂದು ಶಂಭು ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.