ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಪ್ರತಿ ವರ್ಷದಂತೆ ಪವಿತ್ರ ಶರಾವತಿ ನದಿಯ ತಟದಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ‘ಶರಾವತಿ ಕುಂಭ- ಶರಾವತಿ ಆರತಿ’ ಕಾರ್ಯಕ್ರಮ ನಡೆಯಿತು.
ಏ.11ರ ಮುಂಜಾನೆ ತೀರ್ಥಸ್ನಾನದೊಂದಿಗೆ ಮೊದಲ್ಗೊಂಡು 14ರ ಮುಂಜಾನೆ ತೀರ್ಥಸ್ನಾನದೊಂದಿಗೆ ಮುಕ್ತಾಯಗೊಳ್ಳಲಿದ್ದು, ಪ್ರತಿದಿನ ತ್ರಿಕಾಲದಲ್ಲಿ ಪುಣ್ಯಸ್ನಾನದ ಜೊತೆಗೆ ಶರಾವತಿ ಆರತಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಪ್ರಥಮ ದಿನದಂದು ವಿಶ್ವ ಹಿಂದೂ ಪರಿಷತ್‍ನ ಪ್ರಮುಖ ಕೇಶವ ಹೆಗಡೆ, ಬಜರಂಗದಳದ ಪ್ರಮುಖರಾದ ಸುಧೀರ್, ಮಾನವತಾವಾದಿ ಸುಬ್ರಹ್ಮಣ್ಯ ಕೊಣಾಲೆ, ಹರಿದ್ವಾರದ ನಾಗಾ ಸಾಧುಗಳಾದ ಗಂಗಾಗಿರಿ ಮಹಾರಾಜ್, ಇನ್ನಿತರೆ ಸಾಧು ಸಂತರು, ಭಕ್ತಾದಿಗಳು, ಊರ ನಾಗರಿಕರು ಭಕ್ತಿ ಭಾವಗಳೊಂದಿಗೆ ಭಾಗವಹಿಸಿದ್ದರು.
ಶರಾವತಿ ನದಿಯ ತಟದಲ್ಲಿರುವ ಶ್ರೀವನವಾಸಿ ಸೀತಾರಾಮ ಲಕ್ಷ್ಮಣ ದೇವಸ್ಥಾನದ ಆವರಣದಲ್ಲಿ ಏ.14ರ ಮುಂಜಾನೆಯವರೆಗೂ ನಿರಂತರವಾಗಿ ಭಜನೆ ಹಾಗೂ ಹೋಮ- ಹವನಗಳು ನೆರವೇರುವುದು. ಪುಣ್ಯಸ್ನಾನ ಹಾಗೂ ಶರಾವತಿ ಆರತಿಗೆ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಪ್ರತಿಯೊಬ್ಬರೂ ಭಾಗವಹಿಸಿ ಕೃತಾರ್ಥರಾಗಬೇಕೆಂದು ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.