• Slide
    Slide
    Slide
    previous arrow
    next arrow
  • ಸಂಸ್ಕಾರ, ಸಂಸ್ಕೃತಿ ಇಲ್ಲದ ಶಿಕ್ಷಣ ನಿರರ್ಥಕ: ಪ್ರೊ.ಕೆ.ಎನ್.ಹೊಸ್ಮನಿ

    300x250 AD

    ಶಿರಸಿ: ಮನುಷ್ಯನ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣವೇ ಪ್ರಧಾನ. ನಾವು ಕಲಿಯುವ ಶಿಕ್ಷಣದಿಂದ ಬೌದ್ಧಿಕ ವಿಕಾಸವಾಗಿ ನಮ್ಮ ಸಂಸ್ಕೃತಿ ವೃದ್ಧಿಯಾಗುತ್ತದೆ. ಸಂಸ್ಕಾರ ಮತ್ತು ಸಂಸ್ಕೃತಿ ಇಲ್ಲದ ಶಿಕ್ಷಣ ನಿರರ್ಥಕ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಎನ್.ಹೊಸ್ಮನಿ ಹೇಳಿದರು.

    ಅವರು ವೆಂಕಟರಮಣ ದೇವಾಲಯದ ಧ್ಯಾನಮಂದಿರದಲ್ಲಿ ನಡೆದ ಜಿ.ಎಸ್.ಬಿ ಸೇವಾವಾಹಿನಿಯ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಯಾವ ಶಿಕ್ಷಣದಿಂದ ವಿದ್ಯಾರ್ಥಿಗೆ ಸ್ವಾಭಿಮಾನ ಬರುತ್ತದೆಯೋ ಆ ಶಿಕ್ಷಣವೇ ಅಮೃತ ಸಮಾನ. ಓರ್ವ ಸ್ವಾಭಿಮಾನಿ ವಿದ್ಯಾರ್ಥಿ ಮಾತ್ರ ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಅದನ್ನು ಸಮರ್ಥವಾಗಿ ನಿರ್ವಹಿಸಬಲ್ಲ. ಯಾವುದೇ ಪರೀಕ್ಷೆಯನ್ನೂ ಧೈರ್ಯದಿಂದ ಎದುರಿಸಬಲ್ಲ. ನಾವು ಕಲಿತ ಶಿಕ್ಷಣದಿಂದ ಬೌದ್ಧಿಕ ವಿಕಾಸವಾದಾಗ ಅದು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮಾಡುತ್ತದೆ. ಅದರಿಂದ ಸಮಾಜದ ಆಗುಹೋಗುಗಳಿಗೆ ಭಾವನಾತ್ಮಕವಾಗಿ ಸ್ಪಂದಿಸುವ ಶಕ್ತಿಯನ್ನು ಕೊಡುತ್ತದೆ. ಹಾಗಾದಾಗಲೇ ನಾವು ಪಡೆದ ಶಿಕ್ಷಣದ ಸದ್ವಿನಿಯೋಗವಾಗುತ್ತದೆ ಎಂದರು.

    ಶಿಬಿರ ಉದ್ಘಾಟಿಸಿ ಮಾತನಾಡಿದ ಲೋಕಮಿತ್ರ ಫೌಂಡೇಶನ್ ಅಧ್ಯಕ್ಷ ರಾಮು ಕಿಣಿ, ‘ಆನೋ ಭದ್ರಾ ಕೃತವೋ ಯಂತು ವಿಶ್ವತಃ’ ಎಂಬ ನುಡಿಯಂತೆ ಒಳ್ಳೆಯ ವಿಚಾರಗಳು ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಅದನ್ನು ಸ್ವೀಕರಿಸಬೇಕು. ಸ್ವೀಕರಿಸಿ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದರೆ ಮಾತ್ರ ನಮ್ಮ ಬಾಳು ಬಂಗಾರವಾಗುತ್ತದೆ. ಈ ಶಿಬಿರದಲ್ಲಿ ನೀವು ಪಡೆದ ವಿವಿಧ ವಿಷಯಗಳನ್ನು ಕೇವಲ ಕೇಳಿ ಮರೆತುಹೋಗದಂತೆ ಅವುಗಳನ್ನು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಿ ಸಾರ್ಥಕಗೊಳಿಸಬೇಕೆಂದು ಶಿಬಿರಾರ್ಥಿಗಳಿಗೆ ಹಿತವಚನ ನೀಡಿದರು.

    300x250 AD

    ತೆರಿಗೆ ಸಲಹೆಗಾರ ಸುಧೀರ ಭಟ್ಟ, ನಮ್ಮ ಆದರ್ಶ ಮಾತ್ರ ನಮ್ಮನ್ನು ಜೀವನದಲ್ಲಿ ಮುಂದುವರಿಸುತ್ತದೆ. ಉನ್ನತ ಗುರಿ ಮುಟ್ಟಲು ಗುರುಗಳ ಮಾರ್ಗದರ್ಶನ ಹಾಗೂ ನಮ್ಮ ಅವಿರತ ಪ್ರಯತ್ನ ಬೇಕೇ ಬೇಕು. ಇಂತಹ ಶಿಬಿರಗಳಲ್ಲಿ ಮಾರ್ಗದರ್ಶನ ಪಡೆದು ಜೀವನದಲ್ಲಿ ಗುರಿ ತಲುಪುವಂತೆ ಹಿತವಚನ ನುಡಿದರು. ಇಂಜಿನಿಯರ್ ಅರುಣ ಮೋಹನ ನಾಯಕ, ತಮ್ಮ ಉತ್ಸಾಹಭರಿತ ಮಾತುಗಳಿಂದ ಶಿಬಿರಾರ್ಥಿಗಳಿಗೆ ಉತ್ತೇಜನ ನೀಡಿದರು.

    ಪ್ರಭಾ ಬಾಳೂರ ಹಾಗೂ ಶ್ರೀದೇವಿ ಕಿಣಿಯವರು ಹಾಡಿದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇವಾವಾಹಿನಿಯ ಕಾರ್ಯದರ್ಶಿ ವಾಸುದೇವ ಶಾನಭಾಗ ಸ್ವಾಗತಿಸಿ ಪರಿಚಯಿಸಿದರು. ಮೊಕ್ತೇಸರ ವಿಷ್ಣುದಾಸ ಕಾಸರಕೋಡ ಅಧ್ಯಕ್ಷತೆ ವಹಿಸಿದ್ದರು. ಆನಂದ ಆರ್.ಕಾಮತ ನಿರೂಪಿಸಿದರು. ಸಮಾಜದ ಹಿರಿಯ ಮುರಳೀಧರ ಎನ್.ಪ್ರಭು, ಅಜಿತ ಬಿಳಗಿ ಕೊರ್ಲಕಟ್ಟಾ, ಪ್ರಕಾಶ ನೇತ್ರಾವಳಿ, ಚಂದನ ಬಾಳೂರ, ವಿವೇಕ ಪೈ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top