ಮುಂಡಗೋಡ: ರಾಮನವಮಿ ಹಿನ್ನೆಲೆಯಲ್ಲಿ ತಾಲೂಕಿನ ಶ್ರೀರಾಮ ಸೇನೆ ವತಿಯಿಂದ ಮಂಗಳವಾರ ಸಂಜೆ ಪಟ್ಟಣದಲ್ಲಿ ಬೃಹತ್ ಶೋಭಾ ಯಾತ್ರೆಯು ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಮಾರಿಕಾಂಬಾ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಶಿವಾಜಿ ಸರ್ಕಲ್ ಮೂಲಕ ಅಯ್ಯಪ್ಪ ದೇವಸ್ಥಾನದವರೆಗೆ ಶ್ರೀ ರಾಮನ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆ ಉದ್ದಕ್ಕೂ ಜೈ ಶ್ರೀರಾಮ, ಜೈ ಶ್ರೀರಾಮ ಜಯಘೋಷ ಕೇಳಿ ಬರುತ್ತಿತ್ತು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾಟದಿಂದ ಯಾವುದೇ ಹಬ್ಬದ ಮೆರವಣಿಗೆ ಮಾಡಿರಲಿಲ್ಲ. ಕಿವಿಗಡಚಿಕ್ಕುವ ಡಿಜೆ ಸೌಂಡಿಗೆ ಕೇಸರಿ ಶಾಲು ಧರಿಸಿದ್ದ ಯುವಕರು ಹುಚ್ಚೆದ್ದು ಕುಣಿದರು. ಈ ಸಲದ ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಮೆರವಣಿಗೆಯ ಯಶಸ್ಸಿಗೆ ಕಾರಣದರು. ಶಿವಾಜಿ ಸರ್ಕಲ್‍ನಲ್ಲಿ ಮೆರವಣಿಗೆಯ ಸಾಲು ದೊಡ್ಡದಿದ್ದು ಎತ್ತ ನೋಡಿದರೂ ಜನರ ದಂಡೇ ಕಾಣುತ್ತಿತ್ತು.
ಇದಲ್ಲದೆ ತಾಲೂಕಿನ ಪಾಳಾ ಗ್ರಾಮದಲ್ಲಿ ರಾಮನವಮಿ ಪ್ರಯುಕ್ತ ಮಂಗಳವಾರ ಶ್ರೀರಾಮ ಸೇನೆ ಪಾಳಾ ಘಟಕದಿಂದ ಗ್ರಾಮದಲ್ಲಿ ಬೈಕ್ ರ್ಯಾಲಿ ನಡೆಯಿತು.