ಮುಂಡಗೋಡ: ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ನೌಕರಿ ಪಡೆದುಕೊಂಡಿರುವ ಆರೋಪದಲ್ಲಿ ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರ ಪ್ರಕರಣ ನ್ಯಾಯಾಲಯದಲ್ಲಿ ಪೂರ್ಣ ವಿಚಾರಣೆಯಾಗಿ ತೀರ್ಪು ಬರುವವರೆಗೂ ಅವರನ್ನು ತಹಸೀಲ್ದಾರ್ ಹುದ್ದೆಯಲ್ಲಿ ಮುಂದುವರೆಸಬಾರದು ಎಂದು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.
ಜವಾಬ್ದಾರಿ ಹುದ್ದೆಯನ್ನು ಪಡೆದುಕೊಂಡಿರುವ ಶ್ರೀಧರ ಮುಂದಲಮನಿ ನಕಲಿ ಜಾತಿ ಪ್ರಮಾಣ ಪತ್ರವನ್ನು ನೀಡಿ ಸರ್ಕಾರಕ್ಕೆ ಹಾಗೂ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಈ ಕುರಿತು ಅವರ ವಿರುದ್ಧ ಸೂಕ್ತ ಕಾನೂನು ತನಿಖೆಯಾಗಿ ಅವರು ಆರೋಪಿತರಲ್ಲ ಎಂದು ಸಾಬಿತು ಆಗುವವರೆಗೂ ದಂಡಾಧಿಕಾರಿ ಹುದ್ದೆಯಲ್ಲಿ ಮುಂದುವರೆಸ ಬಾರದು ಎಂದು ಅವರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೇರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಯವರೆಗೂ ತೆರಳಿ ಕಚೇರಿಯ ಮುಂಭಾಗದಲ್ಲಿ ಧರಣಿ ಕುಳಿತಿದ್ದಾರೆ.
ಬೀಮಷಿ ವಾಲ್ಮೀಕಿ, ಖೇಮಣ್ನ ಲಮಣಿ, ಯಲ್ಲವ್ವಾ ಭೋವಿ, ಮಾರ್ಟಿನ್ ಬಳ್ಳಾರಿ, ಜೈತುನಬಿ ಜಿಗಳೂರ, ಸರೋಜ ಮೇದಾರ, ಗೌರವ್ವ ಮೇದಾರ ಧರಣಿ ಸತ್ಯಾಗ್ರಹ ಇದ್ದರು.
ಧರಣಿ ಸತ್ಯಾಗ್ರಹದ ಬಗ್ಗೆ ಪೊಲೀಸ್ ಇಲಾಖೆಯಿಂದಾಗಲಿ, ತಹಶೀಲ್ದಾರ ಕಛೇರಿಯಿಂದಾಗಲಿ ಅನುಮತಿ ಪಡೆಯಬೇಕು. ಆದರೆ ಇವರು ಯಾವುದೇ ಅನುಮತಿ ಪಡೆದಿಲ್ಲ. ಇದು ವೈಯಕ್ತಿಕ ವಿಷಯ. ತಾಲೂಕಿಗೆ ಮತ್ತು ಅವರಿಗೆ ಏನಾದರು ತೊಂದರೆ ಆಗಿದ್ದರ ಬಗ್ಗೆ ಸಾಬೀತು ಪಡಿಸಿದರೆ ಸಂಬಂಧಪಟ್ಟಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಇವರ ಹಿಂದೆ ಕಾಣದ ಕೈಗಳು ಇವರಿಗೆ ಕುಮ್ಮಕ್ಕು ಕೊಟ್ಟು ಆಟ ಆಡಿಸುತ್ತಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಇದೆ. ಇವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವ ವಿಚಾರ ಮಾಡಿದ್ದೇನೆ ಎಂದು ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ತಿಳಿಸಿದರು.