ಸಿದ್ದಾಪುರ:ಮಕ್ಕಳು ಜ್ಞಾನವನ್ನು ಸಂಪಾದಿಸಿಕೊಳ್ಳಬೇಕಾದರೆ ಶಿಕ್ಷಣದ ಜತೆಗೆ ಸಾಹಿತ್ಯವನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕೆಂದು ಮಕ್ಕಳ ಸಾಹಿತಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ತಮ್ಮಣ್ಣ ಬೀಗಾರ ಹೇಳಿದರು.
ಪಟ್ಟಣದ ಬಾಲಭವನದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಸಿದ್ದಾಪುರ ಹಾಗೂ ಲಯನ್ಸ್ ಕ್ಲಬ್ ಸಿದ್ದಾಪುರ ಇವರು ಆಯೋಜಿಸಿದ್ದ ಚಿಣ್ಣರ ಕಲರವ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಅವರು ಮಂಗಳವಾರ ಮಾತನಾಡಿದರು.
ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಹೇಳಿದರು.
ತಾಲೂಕು ಸರ್ಕಾರಿ ನಿವೃತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಅಧ್ಯಕ್ಷತೆವಹಿಸಿದ್ದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡ,ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ನಿವೃತ್ತ ನೌಕರರ ಸಂಘದ ಎನ್.ವಿ.ಹೆಗಡೆ, ವಿ.ಎಸ್.ಶೇಟ್,ಡಿ.ವಿ.ಶೇಟ್, ಜಿ.ಎಂ.ಕುಮಟಾಕರ್,ಕೆ.ಕೆ.ಗಣಪತಿ. ಮಿಮಿಕ್ರಿ ಕಲಾವಿದ ಜಯಂತ ಹೆಗಡೆ ಕಲ್ಲಾರೆಮನೆ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಶಿಬಿರಾರ್ಥಿಗಳಿಗೆ ಒಂದೊಂದು ಪುಸ್ತಕ ಹಾಗೂ ವಿಜಯವಾಣಿ ವಿದ್ಯಾರ್ಥಿಮಿತ್ರವನ್ನು ವಿತರಿಸಲಾಯಿತು.
ಶಿಬಿರಾರ್ಥಿ ಆಶ್ರೀತ ಸ್ವಾಗತಿಸಿದರು. ಸುಖಿ ವಂದಿಸಿದರು. ಅನಂತ ನಾಯ್ಕ ನಿರ್ವಹಿಸಿದರು.