ಕಾರವಾರ: ಅಂಕೋಲಾ ಹಾಗೂ ಕಾರವಾರ ತಾಲ್ಲೂಕಿನ ವಿವಿಧೆಡೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕಿ ರೂಪಾಲಿ ಎಸ್.ನಾಯ್ಕ, ಕ್ಷೇತ್ರದ ಮೂಲೆ ಮೂಲೆಯಲ್ಲೂ ಅಭಿವೃದ್ಧಿ ಸಾಧಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸಲು ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದರು.
ಕಾರವಾರ ತಾಲ್ಲೂಕಿನ ಅಮದಳ್ಳಿ, ಅಂಕೋಲಾ ತಾಲ್ಲೂಕಿನ ಡೊಂಗ್ರಿ, ಅಚವೆ, ಹಿಲ್ಲೂರು ಹಾಗೂ ಮೊಗಟಾ ಗ್ರಾಮ ಪಂಚಾಯತಿಯ ವಿವಿಧೆಡೆ ರಸ್ತೆ, ಸೇತುವೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಹಲವು ವರ್ಷಗಳ ಬೇಡಿಕೆಯಾಗಿದ್ದ ಕಾರವಾರ ತಾಲ್ಲೂಕಿನ ಅಮದಳ್ಳಿಯ ಬಾಳೇರಾಶಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದರಿಂದ ಜನತೆಗೆ ಅನುಕೂಲ ಉಂಟಾಗಲಿದೆ. ಮಳೆಗಾಲ ಹಾಗೂ. ಪ್ರವಾಹ ಉಂಟಾದಾಗಲೆಲ್ಲ ಜನತೆಗೆ ತಿರುಗಾಡುವುದಕ್ಕೂ ಕಷ್ಟವಾಗುತ್ತಿತ್ತು. ಮಕ್ಕಳು ಶಾಲೆಗೆ ಹೋಗಬೇಕೆಂದರೂ ಕಷ್ಟಪಡಬೇಕಿತ್ತು. ಸೇತುವೆಯೂ ಶೀಘ್ರದಲ್ಲಿ ನಿರ್ಮಾಣವಾಗಿ ಜನರ ಬಳಕೆಗೆ ಸಿಗಲಿದೆ ಎಂದು ಹೇಳಿದರು.
ಕೊಟ್ಟ ಮಾತಿನಂತೆ ಅಭಿವೃದ್ಧಿ: ಅಂಕೋಲಾ ತಾಲ್ಲೂಕಿನ ಡೊಂಗ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಸೆಹಳ್ಳಕ್ಕೆ ಅಪ್ಪೆಗುಂಡಿ ಬಳಿ ಅಂದಾಜು 100ಲಕ್ಷ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, 2019ರಲ್ಲಿ ಪ್ರವಾಹ ಬಂದಾಗ ಇಲ್ಲಿಯ ಜನರಿಗೆ ನೆರವು ನೀಡುವುದಕ್ಕೆ ಕಷ್ಟವಾಗಿತ್ತು. ಸಂಪರ್ಕವೇ ಇಲ್ಲದೇ ಕಷ್ಟಪಡುವ ಸ್ಥಿತಿ ಇಲ್ಲಿಯ ಜನರಿಗೆ ಇತ್ತು. ಆದರೆ ಈಗ ಸೇತುವೆ, ರಸ್ತೆ ನಿರ್ಮಾಣದಿಂದಾಗಿ ಜನ ಸಂಪರ್ಕ ಸಾಧ್ಯವಾಗಿದೆ. ರಾಮನಗುಳಿ ಸೇತುವೆ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಈ ಹಳ್ಳಕ್ಕೆ ನೀರಿನ ಹರಿವು ಹೆಚ್ಚಾಗಿ ಸಂಚಾರ ದುಸ್ತರವಾಗುತ್ತಿತ್ತು. ಈಗ ಸಂಚಾರಕ್ಕೆ ಅನುಕೂಲವಾಗುವುದಕ್ಕೆ ಸೇತುವೆ ನಿರ್ಮಾಣವಾಗಲಿದೆ. ಯಾವುದೇ ಕಾರ್ಯ ಸಾಧನೆ ಮಾಡಬೇಕಾದರೆ ಸತತ ಪ್ರಯತ್ನ ಅವಶ್ಯಕವಾಗಿದೆ. ಡೋಂಗ್ರಿ ಪಂಚಾಯತಿ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿರಬೇಕು. ಕೊಟ್ಟ ಮಾತಿನಂತೆ ಎಲ್ಲೆಡೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ತೊಗಸೆ ಹರಿಜನಕೇರಿ ಹತ್ತಿರ ಸೇತುವೆ ನಿರ್ಮಾಣ; ಹಿಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಗಸೆ ಹರಿಜನಕೇರಿ ಹತ್ತಿರ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕಿ ರೂಪಾಲಿ ಎಸ್.ನಾಯ್ಕ ಭೂಮಿ ಪೂಜೆ ನೆರವೇರಿಸಿದರು. ಮಳೆಗಾಲದಲ್ಲಿ ಈ ಹಳ್ಳಕ್ಕೆ ನೀರಿನ ಹರಿವು ಹೆಚ್ಚಾಗಿ ಸಂಚಾರ ದುಸ್ತರವಾಗುತ್ತಿತ್ತು. ಊರಿನ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಅಭಿವೃದ್ಧಿಗೆ ನಿರಂತರ ಅನುದಾನ ಒದಗಿಸಲಾಗುತ್ತಿದ್ದು, ಈ ಗ್ರಾಮದ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಕುಂಟಗಣಿ ನೀರ್‌ಕುಳಿ ಸೇತುವೆ: ಅಚವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಟಗಣಿ ನೀರ್‌ಕುಳಿ ಅಂದಾಜು 60 ಲಕ್ಷ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕಿ ಶಂಕುಸ್ಥಾಪನೆ ನೆರವೇರಿಸಿದರು. ಕ್ಷೇತ್ರದ ಮೂಲೆ ಮೂಲೆಗೂ ಹೋಗಿ ಅಲ್ಲಿಯ ಜನರ ಕಷ್ಟಗಳನ್ನು ಕಂಡಿದ್ದೇನೆ. ಹಿಂದಿನ ಜನ ಪ್ರತಿನಿಧಿಗಳು ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷ್ಯ ಮಾಡಿರುವುದು ವಿಷಾದಕರ ಸಂಗತಿ. ಅಂತಹ ಗ್ರಾಮಗಳಿಗೆ ಅವಶ್ಯಕವಾಗಿರುವ ಸೌಲಭ್ಯ ತಲುಪಿಸಲು ಪ್ರಯತ್ನಿಸುತ್ತಿದ್ದೇನೆ. ಸೌಲಭ್ಯ ವಂಚಿತ ಗ್ರಾಮಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಮದಳ್ಲಿ, ಡೊಂಗ್ರಿ, ಹಿಲ್ಲೂರು, ಅಚವೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.