• Slide
    Slide
    Slide
    previous arrow
    next arrow
  • ತಿಂಗಳದೊಳಗೆ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ

    300x250 AD

    ಅಂಕೋಲಾ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ವರ್ಷ ಮಾತ್ರ ಬಾಕಿ ಉಳಿದಿದೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಕಾರ್ಯಚಟುವಟಿಕೆ ಪ್ರಾರಂಭಿಸಿದೆ. ಇದರ ನಡುವೆ ಸಚಿವ ಸಂಪುಟ ವಿಸ್ತರಣೆಗೂ ಸಿದ್ಧತೆ ಮಾಡಿಕೊಂಡಿದ್ದು, ಬಹುತೇಕ ಈ ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆ ಆಗಲಿದೆ ಎನ್ನಲಾಗಿದೆ. ಇನ್ನು ಈ ಬಾರಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ.

    2023ರ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಇನ್ನು ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ಏರಲು ಬಿಜೆಪಿ ಸರ್ಕಾರ ಎಲೆಕ್ಷನ್ ಕ್ಯಾಬಿನೇಟ್ ರಚಿಸಲು ಮುಂದಾಗಿದೆ ಎನ್ನಲಾಗಿದೆ. ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎನ್ನುವ ಮಾತು ಕೇಳಿ ಬಂದಿದ್ದವು. ಆದರೆ ಕಳೆದ ಐದಾರು ತಿಂಗಳಿನಿಂದ ಹಾಗೇ ಸಚಿವ ಸಂಪುಟ ವಿಸ್ತರಣೆ ದಬ್ಬುತ್ತಾ ಬಂದಿದ್ದು ಮೂಲಗಳ ಪ್ರಕಾರ ಇದೇ ತಿಂಗಳ 16 ಮತ್ತು 17ರಂದು ಬಳ್ಳಾರಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ನಡೆಯಲಿದ್ದು ಕಾರ್ಯಕಾರಣಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಸೇರಿ ಹಲವರು ಪಾಲ್ಗೊಳ್ಳಿದ್ದಾರೆ. ಇದಾದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎನ್ನಲಾಗಿದೆ.

    ಇನ್ನು ಈ ಬಾರಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗಬಹುದೇ ಎನ್ನುವ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ. ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕರಿಗೆ ಈ ಹಿಂದಿನಿಂದ ಸಚಿವ ಸ್ಥಾನ ಸಿಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಹೈಕಮಾಂಡ್‍ನಲ್ಲಿ ಅಂತಿಮ ಹಂತದ ವರೆಗೆ ಹೆಸರು ಹೋಗಿ ಸಚಿವ ಸ್ಥಾನ ತಪ್ಪಿತ್ತು. ಈ ಬಾರಿ ಎಲೆಕ್ಷನ್ ಕ್ಯಾಬಿನೇಟ್‍ನಲ್ಲಿ ಮಹಿಳೆಯರಿಗೆ ಆದ್ಯತೆ ಕೊಡುವ ನಿಟ್ಟಿನಲ್ಲಿ ರೂಪಾಲಿ ನಾಯ್ಕರಿಗೆ ಆದ್ಯತೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪನವರಿಗೆ ಆಪ್ತರೂ ಆಗಿರುವ ರೂಪಾಲಿ ನಾಯ್ಕ ಪಕ್ಷದಲ್ಲೂ ತನ್ನದೇ ಆದ ಹಿಡಿತವನ್ನ ಇಟ್ಟುಕೊಂಡಿದ್ದು, ಇತ್ತಿಚ್ಚಿಗೆ ಸದನದಲ್ಲಿ ಸಿದ್ದರಾಮಯ್ಯನವರ ವಿರುದ್ಧವೇ ಧ್ವನಿ ಎತ್ತಿ ಗಮನ ಸೆಳೆದಿದ್ದರು. ಈ ಹಿನ್ನಲೆಯಲ್ಲಿ ಮಹಿಳಾ ಕೋಟಾದಡಿ ರಾಜ್ಯದಲ್ಲಿ ಮಹಿಳಾ ಮತದಾರರನ್ನ ಸೆಳೆಯಲು ರೂಪಾಲಿ ನಾಯ್ಕರಿಗೆ ಆದ್ಯತೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

    300x250 AD

    ಇದಲ್ಲದೇ ಕುಮಟಾ ಶಾಸಕ ದಿನಕರ ಶೆಟ್ಟಿ ಹೆಸರು ಸಹ ಕೇಳಿ ಬಂದಿದೆ. ಎರಡನೇ ಬಾರಿ ಶಾಸಕರಾಗಿರುವ ದಿನಕರ ಶೆಟ್ಟಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಆಪ್ತರಾಗಿದ್ದಾರೆ. ಕರಾವಳಿ ಭಾಗಕ್ಕೆ ಆದ್ಯತೆ ಕೊಡುವ ನಿಟ್ಟಿನಲ್ಲಿ ದಿನಕರ ಶೆಟ್ಟಿಗೆ ಅವಕಾಶ ಕೊಟ್ಟರು ಆಶ್ಚರ್ಯ ಪಡುವಂತಿಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಇದರ ನಡುವೆ ಸ್ಪೀಕರ್ ಕಾಗೇರಿಯವರ ಹೆಸರು ಸಹ ಕೇಳಿ ಬಂದಿದೆ. ಸರ್ಕಾರ ರಚನೆ ವೇಳೆ ಮುಖ್ಯಮಂತ್ರಿ ಪಟ್ಟಿಯಲ್ಲಿ ಕಾಗೇರಿಯವರ ಹೆಸರು ಕೇಳಿ ಬಂದಿತ್ತು. ಕಾಗೇರಿಯವರಿಗೆ ಸಚಿವ ಸ್ಥಾನವನ್ನ ಕೊಡಲಿದ್ದಾರೆ ಎನ್ನಲಾಗಿತ್ತು. ಆದರೆ ಸ್ಪೀಕರ್ ಸ್ಥಾನ ಕೊಟ್ಟಿದ್ದು ಸರ್ಕಾರ ರಚನೆಯಾದಾಗಿನಿಂದ ಸಮರ್ಥವಾಗಿ ಸ್ಪೀಕರ್ ಸ್ಥಾನ ನಿಭಾಯಿಸಿಕೊಂಡು ಕಾಗೇರಿ ಹೋಗುತ್ತಿದ್ದಾರೆ.

    ಸರ್ಕಾರ ವರ್ಷ ಬಾಕಿ ಇರುವ ಹಿನ್ನಲೆಯಲ್ಲಿ ಕಾಗೇರಿಯವರಿಗೆ ಸಚಿವ ಸ್ಥಾನ ಅವಕಾಶ ಕೊಟ್ಟು ಕ್ಲೀನ್ ಹ್ಯಾಂಡ್ ರಾಜಕಾರಣಿಗಳಿಗೆ ಅವಕಾಶ ಕೊಡುವ ಮೂಲಕ ಮತದಾರರನ್ನ ಸೆಳೆಯುವ ಚಿಂತನೆಯನ್ನ ಸಹ ಮಾಡಿದ್ದಾರೆ ಎನ್ನಲಾಗಿದ್ದು ಈ ಎಲ್ಲಾ ಗೊಂದಲಗಳಿಗೆ ತಿಂಗಳ ಒಳಗೆ ತೆರೆ ಬೀಳಲಿದ್ದು ಈ ಬಾರಿ ಜಿಲ್ಲೆಗೆ ಸಂಪುಟ ವಿಸ್ತರಣೆಯಲ್ಲಿ ಡಬಲ್ ಧಮಾಕ ಹೊಡೆಯಲಿದೆಯೇ ಎನ್ನುವುದನ್ನ ಕಾದು ನೋಡಬೇಕಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top