
ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದ ಹಾರನಕೇರಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ಕಲ್ಲಪ್ಪಾ ಎಂಬುವವರು ತಮ್ಮ ಹೊಲದಿಂದ ಎತ್ತುಗಳೊಂದಿಗೆ ಬರುತ್ತಿರುವಾಗ ಚಿರತೆ ತನ್ನ ಎರಡು ಮರಿಗಳೊಂದಿಗೆ ಪ್ರತ್ಯಕ್ಷವಾದ ಘಟನೆ ಸೋಮವಾರ ಸಾಯಂಕಾಲ ಜರುಗಿದೆ.
ಗದ್ದೆಯಿಂದ ತಮ್ಮ ಕೆಲಸ ಮುಗಿಸಿಕೊಂಡು ಬರುತ್ತಿರುವಾಗ ಹಾರನಕೇರಿ ಅರಣ್ಯ ಪ್ರದೇಶದಲ್ಲಿ ಜಾನುವಾರಗಳ ಮೇಲೆ ಚಿರತೆ ದಾಳಿ ಮಾಡಿತು. ಎತ್ತುಗಳು ಹೆದರಿ ಅರಣ್ಯದ ಕಡೆ ಓಡಿ ಹೋಗಿವೆ. ಎತ್ತುಗಳು ಓಡಿ ಹೋಗಿದ್ದನ್ನು ನೋಡಿ ನಾನು ಭಯಭೀತನಾಗಿ ಓಡಿ ಹೋಗುತ್ತಿರುವಾಗ ಚಿರತೆ ತನ್ನ ಎರಡು ಮರಿಗಳೊಂದಿಗೆ ಇರುವುದನ್ನು ಕಂಡು ಇನ್ನೂ ಭಯಭೀತನಾದ ನಾನು ಎಲ್ಲ ಜಾನುವಾರಗಳನ್ನು ಅಲ್ಲಿಯೇ ಬಿಟ್ಟು ಓಡಿ ಬಂದಿದ್ದೇನೆ. ನಮ್ಮ ಇನ್ನೂ ಮೂರು ದನಗಳು ನಾಪತ್ತೆಯಾಗಿವೆ ಎಂದು ಇಂದೂರ ಗ್ರಾಮದ ರೈತ ಕಲ್ಲಪ್ಪ ಹೇಳಿದರು.
ಇಂದೂರ ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ವೆರ್ಣೇಕರ ಮಾತನಾಡಿ ಸುದ್ದಿ ತಿಳಿಯುತ್ತಿದ್ದಂತೆ ಕಲ್ಲಪ್ಪನೊಂದಿಗೆ ಮಾತನಾಡಿ ಚಿರತೆ ಕಂಡ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ತೆರಳಿದೆವು ಅಲ್ಲಿ ಚಿರತೆ ಇರುವ ಬಗ್ಗೆ ಹೆಜ್ಜೆ ಗುರುತಾಗಲಿ ಮರಿಗಳು ಇರುವ ಬಗ್ಗೆ ಯಾವ ಮಾಹಿತಿ ಸಿಕ್ಕಿಲ್ಲ. ಮೂರು ದನಗಳು ನಾಪತ್ತೆ ಆಗಿದ್ದವು ಎಂದಿದ್ದರು. ಅವು ಇಂದು ಸುರಕ್ಷಿತವಾಗಿ ಮನೆಗೆ ಬಂದಿವೆ. ಚಿರತೆ ಇರುವ ಬಗ್ಗೆ ಖಚಿತವಾದರೆ ಕ್ರಮ ಕೈಗೊಳ್ಳಲಾಗುವುದು ಇದುವರೆಗೆ ನಮ್ಮ ಭಾಗದಲ್ಲಿ ಜಾನುವಾರಗಳಿಗೆ ಸಾರ್ವಜನಿಕರಿಗೆ ಯಾವುದೆ ಹಾನಿಯಾಗಿಲ್ಲ ಎಂದರು.