ಭಟ್ಕಳ: ಅತೀ ಚಿಕ್ಕ ಸಮಾಜವಾದ ಮೊಗೇರರಿಗೆ ಸಿಗಬೇಕಾದ ಪರಿಶಿಷ್ಟ ಜಾತಿ ಸವಲತ್ತುಗಳು ಸಿಗಬೇಕು. ಇದಕ್ಕೆ ಶಾಸಕರು ಹಾಗೂ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಸಚಿವರ ಪ್ರಯತ್ನ ಬೇಕಿದೆ. ನ್ಯಾಯ ಸಿಗುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇವೆ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಸೋಮವಾರ ಇಲ್ಲಿನ ಆಡಳಿತಸೌಧದ ಬಳಿ ಕಳೆದ 20 ದಿನದಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಮೊಗೇರ ಸಮಾಜದವರನ್ನು ಭೇಟಿಯಾಗಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಮೊಗೇರರು ಎರಡು ದಿನದ ಹಿಂದೆ ಅರೆಬೆತ್ತಲೆ, ಉರುಳು ಸೇವೆ ಹಾಗೂ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪತ್ರಿಕೆಯಲ್ಲಿ ಓದಿ ಬೇಸರಗೊಂಡಿದ್ದೇನೆ. ಈ ಸಮಾಜದ ಸಮಸ್ಯೆ ನನ್ನಿಂದ ಬಗೆಹರಿಸುವ ಸಾಧ್ಯವಿದೆಯೇ ಎಂಬುದು ಗೊತ್ತಿಲ್ಲ. ಆದರೆ ಪ್ರತಿಭಟನೆ ನಿರತ ಸಮಾಜದ ಸಮಸ್ಯೆ ಆಲಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದರು.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಲ್ಲಿ ಮಾತುಕತೆ ನಡೆಸಲಾಗಿದ್ದು, ಏಪ್ರಿಲ್ 18- 19ರಂದು ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಅಲ್ಲಿ ಸಕಾರಾತ್ಮಕ ವಿಚಾರದಲ್ಲಿ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಕೀಲ ನಾಗರಾಜ ಎಮ್., ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಂ.ಕರ್ಕಿ, ತಾಲೂಕಾಧ್ಯಕ್ಷ ಅಣ್ಣಪ್ಪ ಮೊಗೇರ, ಗಣೇಶ ಮೊಗೇರ, ಮಹಾಬಲೇಶ್ವರ ಹೆಬಳೆ, ಎಫ್.ಕೆ.ಮೊಗೇರ ಮುಂತಾದವರು ಇದ್ದರು.