• Slide
    Slide
    Slide
    previous arrow
    next arrow
  • ಯಕ್ಷಗಾನ ಸಂವಾದ ಸಂವಹನ-ಫಲಶೃತಿ

    300x250 AD

    ಶಿರಸಿ: ಲಯನ್ಸ್ ಸಭಾ ಭವನದಲ್ಲಿ ಯಕ್ಷಗಾನ ವಿದ್ವಾಂಸ, ನಿವೃತ್ತ ಡೀನ್, ಸಾಹಿತಿ, ಡಾ|| ಜಿ.ಎ. ಹೆಗಡೆ ಸೋಂದಾ ಅವರ ಕೃತಿ “ಯಕ್ಷಗಾನಂ ಗೆಲ್ಗೆ” ಕೃತಿಯ ಲೋಕಾರ್ಪಣೆ ಅಂಗವಾಗಿ ಏ.9ರಂದು “ಯಕ್ಷಗಾನ” ಪ್ರಾದೇಶಿಕ ವ್ಯಾಪ್ತಿ ವಿಸ್ತಾರ ಸಾಧ್ಯತೆಗಳು ಮತ್ತು ಸವಾಲುಗಳು ಒಂದು ಸಂವಾದ” ಸಂವಹನವನ್ನು ಡಾ|| ಜಿ.ಎ.ಹೆಗಡೆ ಸೋಂದಾ ಅವರ ಪರಿಕಲ್ಪನೆಯಲ್ಲಿ ವಿಶಿಷ್ಟವಾಗಿ ಸಂಘಟಿಸಲಾಗಿತ್ತು.

    ವಿಷಯ ಮಂಡನೆ ಮಾಡಿದ ಪ್ರೊ. ಡಾ|| ಜಿ.ಎ. ಹೆಗಡೆ ಸೋಂದಾ ಯಕ್ಷಗಾನವು ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಇನ್ನೂ ಗುರುತಿಸಲ್ಪಟ್ಟಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಯಕ್ಷಗಾನದ ಪ್ರಾದೇಶಿಕ ವ್ಯಾಪ್ತಿಯನ್ನು ವಿಸ್ತರಿಸಬೇಕಾದ ಅಗತ್ಯ ಇದೆ. ಸದ್ಯಕ್ಕೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಶಿವಮೊಗ್ಗ, ಚಿಕ್ಕಮಂಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಮಾತ್ರ ಯಕ್ಷಗಾನದ ಹೆಗ್ಗುರುತನ್ನು ಕಾಣಬಹುದಾಗಿದ್ದು ಇದನ್ನು ಪಾರಂಪರಿಕ ಯಕ್ಷಗಾನವಲಯ ಎನ್ನುಬಹುದಾಗಿದೆ. ಉಳಿದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಕ್ಷಗಾನ ವಿಸ್ತರಿಸಿಲ್ಲ. ಇನ್ನು ಬೆಂಗಳೂರು ಮುಂಬೈಯಂತಹ ಮಹಾನಗರಗಳಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದರೂ ಅದನ್ನು ವೀಕ್ಷಿಸುವ ಪೋಷಿಸುವ ಸಂಘಟಿಸುವ ವರ್ಗ ಮೂಲ ಯಕ್ಷಗಾನವಲಯದಿಂದ ಬಂದವರೇ ಆಗಿರುತ್ತಾರೆ. ಅಲ್ಲಿಯ ಸ್ಥಳೀಯರನ್ನು ಉಳಿದ ಜಿಲ್ಲೆಗಳ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಅಂತಹ ಪ್ರಯತ್ನಗಳು ನಡೆದಿದ್ದರೂ ಅದು ಸವಾಲಾಗಿಯೇ ಉಳಿದಿದೆ. ಹೀಗಾಗಿ ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಇನ್ನೂ ರೂಪುಗೊಂಡಿಲ್ಲ. ಹಾಗೆಂದು “ಯಕ್ಷಗಾನಂ ವಿಶ್ವಗಾನಂ” ಎಂಬ ನೆಲೆಯಲ್ಲಿ ಇದನ್ನು ಎಲ್ಲೆಡೆ ವಿಸ್ತರಿಸಲು ಸಾಕಷ್ಟು ಸಾಧ್ಯತೆಗಳು ಇರುವ ಕಾರಣದಿಂದಾಗಿ ಹಲವು ಸವಾಲುಗಳೂ ಇವೆ. ಶ್ರೀಮಯ ಕಲಾಕೇಂದ್ರದ ನಿರ್ದೇಶಕ ಶಿವಾನಂದ ಹೆಗಡೆ ಕೆರೆಮನೆ ರಾಜ್ಯದ ಹೊರಗಡೆಯಲ್ಲಿ ಅನೇಕ ಪ್ರದರ್ಶನ ನೀಡಿ ಹೊರರಾಜ್ಯದ ವಿದ್ಯಾರ್ಥಿಗಳಲ್ಲಿ ಕಲೆಯ ಬೀಜವನ್ನು ಬಿತ್ತಿ ಅವರನ್ನು ತಮ್ಮ ಕಲಾಕೇಂದ್ರಕ್ಕೆ ಕರೆಸಿ ಅವರಿಗೆ ಯಕ್ಷಗಾನ ಕಲಿಸುವ ಸಾಹಸ ಮಾಡಿದ್ದು ವಿಸ್ತರಣೆಗೆ ಒಂದು ಒಳ್ಳೆಯ ಉದಾಹರಣೆಯಾಗಿದೆ.

    ಹೊಸ್ತೋಟ ಮಂಜುನಾಥ ಭಾಗವತರು ಬರೆದ ‘ನಿಸರ್ಗ ಸಂಧಾನ’ ಮತ್ತು ‘ಬಸವೇಶ್ವರ ಮಹಾತ್ಮೆ’ ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರದರ್ಶನೆಗೊಂಡಿದ್ದು, ದಿ. ಕಡತೋಕ ಮಂಜುನಾಥ ಭಾಗವತರ ಇಡಗುಂಜಿ ಕ್ಷೇತ್ರ ಮಹಾತ್ಮೆ, ಹಲವು ಪ್ರಸಂಗ ಕರ್ತರು ಬರೆದ ಕ್ಷೇತ್ರ ಮಹಾತ್ಮೆಯ ಆಖ್ಯಾನಗಳು ಯಕ್ಷಗಾನ ವಿಸ್ತರಣೆಗೆ ತಮ್ಮದೇ ಆದ ಕೊಡುಗೆ ನೀಡಿವೆ. ಮಂಗಳೂರಿನ ವಿದ್ಯಾ ಕೊಳ್ಯೂರು ಅವರು ಹಿಂದಿ ಭಾಷೆಯಲ್ಲಿ ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ನಡೆಸಿ ವಿಸ್ತರಣೆಯ ಪ್ರಯತ್ನ ಮಾಡಿ ಸವಾಲು ಮತ್ತು ಸಾಧ್ಯತೆಗಳನ್ನು ಮನಗಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಆಂಗ್ಲ ಭಾಷೆಯಲ್ಲಿ ಯಕ್ಷಗಾನ ಪ್ರಯೋಗದ ಪ್ರತಯ್ನವೂ ನಡೆದಿದೆ. ಈಗಾಗಲೇ ತುಳು ಭಾಷೆಯ ಯಕ್ಷಗಾನ ಯಶಸ್ವಿಯಾಗಿದೆ. ಈ ನೆಲೆಯಲ್ಲಿ ಸಂವಾದ ನಡೆಯಬೇಕಾಗಿದೆ. ಯಕ್ಷಗಾನ ವಿಸ್ತರಣೆಯು ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಕಂಗೊಳಿಸಲು ಸಾವಿರಾರು ಕಲಾವಿದರಿಗೆ ಪ್ರದರ್ಶನದ ಅವಕಾಶಗಳನ್ನು ಹೆಚ್ಚಿಸಲು ವಿಸ್ತಾರಣೆಯ ಅಗತ್ಯವಿದೆ. ಎಂದು ಡಾ|| ಜಿ. ಎ. ಹೆಗಡೆ ಸೋಂದಾ ವಿಷಯ ಪ್ರತಿಪಾದಿಸಿದರು.

    ಸಂವಾದದಲ್ಲಿ ಭಾಗಿಯಾದ ಶ್ರೀ ಕಲಾ ಯಕ್ಷಗಾನ ಮಂಡಳಿಯ ಸಂಸ್ಥಾಪಕ ಕೇಶವ ಹೆಗಡೆ ಯಕ್ಷಗಾನ ಪ್ರದರ್ಶನ ಹೊರ ಜಿಲ್ಲೆಗಳಲ್ಲಿ ರಾಜ್ಯದ ಹೊರಗೆ ಬೇರೆ ಬೇರೆ ಭಾಷೆಗಳಲ್ಲಿ ನಡೆದಾಗ ಸಹಜವಾಗಿ ವಿಸ್ತರಣೆ ಸಾಧ್ಯ. ಸವಾಲುಗಳನ್ನು ಎದುರಿಸಿಯೇ ಇದನ್ನು ಸಾಧಿಸಬೇಕು ಎಂದರು. ಯಕ್ಷಾಭಿಮಾನಿ ಲಯನ್ ಎಮ್. ಆಯ್. ಹೆಗಡೆ ಕೇವಲ ಪ್ರದರ್ಶನದಿಂದ ವಿಸ್ತರಣೆ ಸಾಧ್ಯವಾಗದು ಅನ್ಯ ಜಿಲ್ಲೆಗಳಲ್ಲಿ ಯಕ್ಷಗಾನ ಕಲಿಸಿ ಅವರಿಂದ ಪ್ರದರ್ಶನ ಏರ್ಪಡಿಸುವ ಮೂಲಕ ವಿಸ್ತರಣೆಯ ಗುರಿ ಸಾಧಿಸಭೇಕು ಎಂದರು.

    ಚಿಂತಕ ಗಣಪತಿ ಭಟ್ ವರ್ಗಾಸರ ಪ್ರಯೋಗ ಶೀಲತೆಯನ್ನು ಪಾಲಿಸಿ ಸಾಮಾಜಿಕ ಹಾಗೂ ಪಾರಂಪರಿಕ ಕ್ರೋಢಿಕರಣ ಸಾಧಿಸಿ ವಿಸ್ತರಣೆಯ ವ್ಯಾಪ್ತಿಯನ್ನು ಹೆಚ್ಚಿಸಬೇಕು ಎಂದರು ಯಕ್ಷಗಾನ ಕಲಾವಿದೆ ಶಿಕ್ಷಕಿ ಸುಮಾ ಹೆಗಡೆ, ಮೂಲ ಯಕ್ಷಗಾನ ವಲಯದಲ್ಲಿ ಯಕ್ಷಗಾನವು ಕ್ಷೀಣಿಸದಂತೆ ನೋಡಿಕೊಂಡು ಉಳಿದ ಹೊರ ಜಿಲ್ಲೆಗಳಲ್ಲಿ ಯಕ್ಷಗಾನದ ವ್ಯಾಪ್ತಿಯ ವಿಸ್ತರಣೆ ನಡೆಯಬೇಕು ಎಂದರು. ತಾಳ, ಮದ್ದಲೆ ಸಂಘಟಕ ಅರ್ಥದಾರಿ ಎಂ.ವಿ. ಹೆಗಡೆ ಅಮಚಿಮನೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶಿಸುವ ಪ್ರಯತ್ನ ನಡೆದಲ್ಲಿ ವಿಸ್ತರಣೆಗೆ ಅನುಕೂಲವಾದಿತು ಎಂದರು.

    ಲಯನ್ಸ್ ಸ್ಕೂಲ್ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ, ಮಕ್ಕಳ ಮನಸ್ಸಿನಲ್ಲಿ ಯಕ್ಷಗಾನದ ಕಲಿಕೆಯ ಬೀಜ ಬಿತ್ತಿ ಯಕ್ಷಗಾನದ ಪೌರಾಣಿಕ ಸಂಸ್ಕಾರವನ್ನು ನೀಡುವ ಮುಖೇನ ಯಕ್ಷಗಾನವನ್ನು ಅನ್ಯ ಜಿಲ್ಲೆಗಳಿಗೆ ವಿಸ್ತರಿಸುವ ಯತ್ನ ನಡೆಯಬೇಕು ಎಂದರು. ಚಿಂತಕ, ಸಾಹಿತಿ ಡಿ.ಎಂ. ಭಟ್ ಕುಳವೆ ಯಕ್ಷಗಾನವು ಬದುಕಿನ ವೃತ್ತಿಯಾಗದೇ ಶಿಷ್ಟ ಸಾಂಸ್ಕೃತಿಕ ಉಳಿವಿಗಾಗಿ ನಡೆಸುವ ಸಾಂಸ್ಕೃತಿಕ ಪ್ರಕ್ರಿಯೆಯಾಗಿ ಶಾಲಾ ಪಠ್ಯದಲ್ಲಿಯೂ ಇದನ್ನು ಸೇರಿಸುವ ಮೂಲಕ ರಾಜ್ಯಮಟ್ಟಕ್ಕೆ ವ್ಯಾಪ್ತಿಯನ್ನು ಹಿಗ್ಗಿಸಬೇಕು ಎಂದರು.

    300x250 AD

    ಚಿಂತಕ ನಾಡಗುಳಿ ವಿಶ್ವನಾಥ ಕರ್ಮ :-ಉಳಿದ ಜಿಲ್ಲೆಗಳಿಗೆ ಯಕ್ಷಗಾನವನ್ನು ವಿಸ್ತರಿಸಲು ಸರಕಾರ ಹಾಗೂ ಕಲಾ ಪೋಷಕರ ಸಹಾಯ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

    ಲಯನ್ ಗುರುರಾಜ ಹೊನ್ನಾವರ :- ಯಕ್ಷಗಾನದ ಕಾರ್ಯಕ್ರಮಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಅನ್ಯ ಜಿಲ್ಲೆಯ ಜನರು ನೋಡುವಂತೆ ಪ್ರೇರೇಪಿಸುವ ಮೂಲಕ ವಿಸ್ತರಣೆಯ ಸಾಧ್ಯತೆಯನ್ನು ಸವಾಲಾಗಿ ಸ್ವೀಕರಿಸಬೇಕು. ಎಂಧು ಅಭಿಪ್ರಾಯಪಟ್ಟರು.

    ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ವಿಜಯ ನಳಿನಿ ರಮೇಶ ತಮ್ಮ ಅಧ್ಯಕ್ಷ ಭಾಷಣಯಲ್ಲಿ ಶುದ್ಧ ಕನ್ನಡ ಮತ್ತು ಕನ್ನಡದ ಶಾಸ್ತ್ರೀಯತೆ ಉಳಿಯಲು ಯಕ್ಷಗಾನದ ವಿಸ್ತರಣೆ ಎಲ್ಲೆಡೆ ನಡೆಯಬೇಕು ಕನ್ನಡ ಸಾಹಿತ್ಯ ಪರಿಷತ್ತು, ಯಕ್ಷಗಾನ ಅಕಾಡೆಮಿ, ಸರಕಾರ, ಕನ್ನಡ ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಗಮನಹರಿಸಬೇಕು. ಆಂತರಿಕವಾಗಿ ಹಾಗೂ ಬಾಹ್ಯವಾಗಿ ಕಲಾನೆಲೆಯಲ್ಲಿ ಕಲೆಯ ವಿಸ್ತರಣೆ ಮಹತ್ವದ ಅಂಶವಾಗಿದೆ ಎಂದರು.

    ನಿವೃತ್ತ ಪ್ರಾಚಾರ್ಯ ಸಾಹಿತಿ ಡಿ.ಎಂ. ಭಟ್ ಕುಳವೆ ಸಂವಾದದ ನಿಮಂತ್ರಕವಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು. ಸಂವಾದ ಕಾರ್ಯಕ್ರಮವನ್ನು ಸಾಹಿತಿ ಮಹೇಶಕುಮಾರ ಕವಿಯಿತ್ರಿ ಭವ್ಯಹಳಿಯೂರು ಸೊಗಸಾಗಿ ನಿರ್ವಹಿಸಿದರು. ಸಾಹಿತಿ ಕೃಷ್ಣ ಪದಕಿ ವಂದನಾರ್ಪಣೆ ಸಲ್ಲಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top