ಯಲ್ಲಾಪುರ: ಮನೆ ಮನೆಯಲ್ಲಿ ಸಂಪ್ರದಾಯಬದ್ಧವಾಗಿ ನಡೆಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ನಮ್ಮ ಜೀವ ನಾಡಿಯಾದ ಕಲಾ ಪ್ರಕಾರಗಳನ್ನು ಸಂಘಟಿಸಿ ತನ್ಮೂಲಕ ಸಾಧಕ ಕಲಾವಿದರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸುವ ಕೆಲಸ ಶ್ಲಾಘನೀಯ ಎಂದು ಶಿರಸಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಸತೀಶ ಭಟ್ಟ ನಾಡಗುಳಿ ಹೇಳಿದರು.
ಅವರು ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಕರಡಿಗೆಮನೆಯಲ್ಲಿ ಬ್ರಹ್ಮೋಪದೇಶದ ನಿಮಿತ್ತ ಸಂಘಟಿಸಿದ ಯಕ್ಷಗಾನ ಪ್ರದರ್ಶನದಲ್ಲಿ ಖ್ಯಾತ ಭಾಗವತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆಯವರನ್ನು ಶಾಲು ಹೊದೆಸಿ, ತಾಂಬೂಲ ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಮಾತನಾಡುತ್ತಿದ್ದರು. ಬ್ರಹ್ಮೋಪದೇಶ ನೀಡುವಿಕೆ- ಜೀವನ ಹಂತದಲ್ಲಿ ಬಹುಮುಖ್ಯ ಘಟಕವಾಗಿದ್ದು, ಇದು ಸಂಸ್ಕಾರವನ್ನು ಮಾರ್ಗದರ್ಶಿಸುತ್ತದೆ. ಇಂತಹ ಸಂದರ್ಭದಲ್ಲಿ ನವರಸ ತುಂಬಿದ ಯಕ್ಷಗಾನ ಪ್ರಸಂಗವನ್ನು ಏರ್ಪಡಿಸಿ ಹಿರಿಯ ಸಾಧಕ ಕಲಾವಿದರನ್ನು ಗೌರವಿಸುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಾದ ಶಂಕರ ಬಿರುದಾಂಕಿತ ಹಿರಿಯ ಮದ್ದಲೆ ವಾದಕರಾದ ಶಂಕರ ಭಾಗವತ ಯಲ್ಲಾಪುರರವರನ್ನು ಕರಡಿಗೆಮನೆಯ ತಿಮ್ಮಪ್ಪ ಹೆಗಡೆ ಹಾಗೂ ನಾಗವೇಣಿ ದಂಪತಿ ಸನ್ಮಾನಿಸಿದರು.
ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಕರಾದ ಗಣಪತಿ ಹೆಗಡೆ ಮತ್ತು ಭಾರತೀ ಹೆಗಡೆ ದಂಪತಿ, (ಜಿ.ಟಿ)ಅದ್ವೈತ ಕರಡಿಗೆಮನೆ, ಬೆಂಗಳೂರಿನ ನರಸಿಂಹ ಭಟ್ಟ ಶಾನೆಪಾಲ್ ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ನಂತರ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಭಕ್ತ ಹರಿದಾಸ ಚಂದ್ರಹಾಸ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶಿಸಲ್ಪಟ್ಟಿದ್ದು ದುಷ್ಟಬುದ್ಧಿಯಾಗಿ ಸುಬ್ರಹ್ಮಣ್ಯ ಚಿಟ್ಟಾಣಿ, ಚಂದ್ರಹಾಸನಾಗಿ ಕಾರ್ತಿಕ ಕಣ್ಣಿ, ಕಪ್ಪದ ದೂತ ಮತ್ತು ಬ್ರಾಹ್ಮಣನಾಗಿ ಕಾಸರಕೊಡ ಶ್ರೀಧರ ಭಟ್ಟ, ವಿಷಯೇಯಾಗಿ ಕಾವ್ಯ ಶಿವಮೊಗ್ಗ, ಮದನನನಾಗಿ ಉದಯ ಕಡಬಾಳ, ಸಖಿ ಮತ್ತು ದೇವಿಯಾಗಿ ದೀಪಕ ಕುಂಕಿ, ಕಮಕನಾಗಿ ಶ್ರೀಧರ ಪಾಲ್ಗೊಂಡು ಯಕ್ಷಗಾನ ಪ್ರದರ್ಶನಕ್ಕೆ ಮೆರಗು ನೀಡಿದರು.
ಹಿಮ್ಮೇಳದ ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ಚಂಡೆ ವಾದನದಲ್ಲಿ ಗಣೇಶ ಗಾಂವ್ಕರ ಹಳವಳ್ಳಿ ರಂಜಿಸಿದರು.
ಕಲೆ ಪ್ರದರ್ಶನ ಸಂಘಟಿಸಿ ಸನ್ಮಾನಿಸುವುದು ಹೆಮ್ಮೆಯ ಸಂಗತಿ: ಸತೀಶ ಭಟ್ಟ
