
ಕುಮಟಾ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ಭಾಗದ ಪ್ರತೀ ಕುಂಟುಂಬಕ್ಕೂ ಸರ್ಕಾರದ ಸೌಲಭ್ಯ ಒದಗಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ತಾಲೂಕಿನ ಗ್ರಾಮೀಣ ಭಾಗವಾದ ಕತಗಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಜೂರಾದ ಅಂಬ್ಯುಲೆನ್ಸ್‍ಗೆ ಮಂಗಳವಾರ ವಿದ್ಯುಕ್ತವಾಗಿ ಚಾಲನೆ ನೀಡಿ, ಅವರು ಮಾತನಾಡಿದರು. ಕತಗಾಲ ಭಾಗಕ್ಕೆ ಅಂಬ್ಯುಲೆನ್ಸ್ ಒದಗಿಸಲು ಸಾಕಷ್ಟು ಶ್ರಮಿಸಿದ್ದು, ಉಸ್ತುವಾರಿ ಸಚಿವರು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಅಂಬ್ಯುಲೆನ್ಸ್ ಒದಗಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ನೂತನ ಅಂಬ್ಯುಲೆನ್ಸ್ ಒದಗಿಸಲಾಗಿದೆ. ಈ ಭಾಗದ ಜನತೆ ಇದರ ಪ್ರಯೋಜನ ಪಡೆದುಕೊಳ್ಳಲಿ ಎಂದರು.
ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ಮಾತನಾಡಿ, ಗ್ರಾಮೀಣ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಶಾಸಕ ದಿನಕರ ಶೆಟ್ಟಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಗ್ರಾ.ಪಂ ಅಧ್ಯಕ್ಷೆ ಕೇಸರಿ ನಾಯಕ, ಉಪಾಧ್ಯಕ್ಷ ಶ್ರೀಧರ ಫೈ, ತಾಲೂಕಾ ಆರೋಗ್ಯಾಧಿಕಾರಿ ಅಜ್ಞಾ ನಾಯಕ, ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಚೈತ್ರ ಪ್ರಭಾ ನಾಯಕ, ಗ್ರಾ.ಪಂ ಸದಸ್ಯರು, ಅಧಿಕಾರಿಗಳು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಇದ್ದರು