ಯಲ್ಲಾಪುರ: ನಶಿಸಿ ಹೋಗುತ್ತಿರುವ ಸಾಂಸ್ಕೃತಿಕ ಕಲೆಗಳಿಗೆ ಜೀವ ತುಂಬಿ, ಮತ್ತೆ ಮುಖ್ಯವಾಹಿನಿಗೆ ತರುವ ಮೂಲಕ ಕನ್ನಡವನ್ನು ಸಾಂಸ್ಕೃತಿಕವಾಗಿ ಇನ್ನಷ್ಟು ಶ್ರೀಮಂತಗೊಳಿಸುವಂತೆ ಮಾಡುವ ಸಂಕಲ್ಪವನ್ನು ಇಲಾಖೆ ಮಾಡಿದೆ. ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ ಹೇಳಿದರು.
ಅವರು ಪಟ್ಟಣದ ಗಾಂಧಿ ಕುಟೀರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೀವನ ವಿಕಾಸ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬುಡಕಟ್ಟು ಸಿದ್ದಿ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡದ ಕಲೆಗಳನ್ನು ಪ್ರೋತ್ಸಾಹಿಸುವ ಅಭಿಯಾನವನ್ನು ಇಲಾಖೆ ಹಮ್ಮಿಕೊಂಡಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಶೀರ್ಷಿಕೆಯ ಅಡಿಯಲ್ಲಿ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಬುಡಕಟ್ಟು ಸಮುದಾಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಇಂತಹ ಸಣ್ಣ ಸಮುದಾಯಗಳ ಸಂಸ್ಕೃತಿಗಳಿಂದಲೇ ಭಾರತೀಯ ಸಂಸ್ಕೃತಿ ಶ್ರೇಷ್ಠವೆನಿಸಿದೆ. ಯಾವುದೇ ಸಮುದಾಯದ ವಿಶಿಷ್ಟ ಸಂಸ್ಕೃತಿ, ಆಹಾರ, ಆಚರಣಾ ಪದ್ಧತಿಯನ್ನು ಉಳಿಸಿಕೊಂಡು ಹೋಗಲು, ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಬೇಕಾದ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ. ಯಲ್ಲಾಪುರ ಭಾಗದಲ್ಲಿ ಬುಡಕಟ್ಟು ಉತ್ಸವವನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಕಷ್ಟಗಳನ್ನು ಸಹಿಸಿಕೊಂಡು ಬೆಳೆದ ಸಿದ್ದಿ ಸಮುದಾಯ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಕ್ರೀಡೆ, ಸಾಂಸ್ಕೃತಿ ವಿಭಾಗದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಸಮುದಾಯ ಇನ್ನಷ್ಟು ಅಭಿವೃದ್ಧಿ ಸಾಧಿಸಲು ಸರ್ಕಾರದ ಪ್ರೋತ್ಸಾಹ ಅಗತ್ಯ ಎಂದರು. ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಿದ್ದಿ ಸಮುದಾಯದ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು.
ಸಿದ್ದಿ ಸಮುದಾಯದ ಸಾಧಕರನ್ನು ಗೌರವಿಸಲಾಯಿತು. ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ.ನಾಯಕ ಇದ್ದರು. ಭಾಸ್ಕರ ಸಿದ್ದಿ, ಕೇಬಲ್ ನಾಗೇಶ, ವೀಣಾ ಸಿದ್ದಿ ನಿರ್ವಹಿಸಿದರು. ನಂತರ ಜಿಲ್ಲೆಯ ವಿವಿಧೆಡೆಯಿಂದ ಬಂದ ಸಿದ್ದಿ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಿತು.