ಶಿರಸಿ; ಕಂಚಿಕೈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಪ್ಪತ್ಮೂರು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಭಾಗೀರಥಿ ರಾಮ ಹೆಗಡೆ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ನೂರಾರು ಜನ ಸೇರಿದ ಈ ಕಾರ್ಯಕ್ರಮದಲ್ಲಿ ಪಾಲಕರು ಮತ್ತು ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಜನ್ಮ ನೀಡಿದ ತಾಯಿ ಮೊದಲ ಗುರುವಾದರೆ ಸದಾ ನೆನಪಿನಲ್ಲಿ ಉಳಿಯುವ ಎರಡನೇ ಗುರು ಎಂದರೆ ಪ್ರಾಥಮಿಕ ಶಾಲೆಯ ಶಿಕ್ಷಕರು.ದಯೆ ಮತ್ತು ಪ್ರೀತಿಯೊಂದಿಗೆ ಜಗತ್ತಿನ ಶ್ರೇಷ್ಠ ವ್ಯಕ್ತಿಗಳನ್ನು ನಿರ್ಮಾಣ ಮಾಡುವ, ಕತ್ತಲಿನಿಂದ ಬೆಳಕಿನೆಡೆಗೆ ಅಜ್ಞಾನದಿಂದ ಜ್ಞಾನದ ಕಡೆಗೆ ದಾರಿ ತೋರಿಸುವ ಗುರುಗಳು ವಿದ್ಯಾರ್ಥಿ ಗಳಿಗೆ ಎರಡನೇ ತಾಯಿ ಇದ್ದಂತೆ. ಅಂತಹ ಸದ್ಗುಣಗಳನ್ನು ಹೊಂದಿದ ಭಾಗೀರಥಿ ಹೆಗಡೆ ಶಿಕ್ಷಕಿಯವರು ಮಣ್ಣಿನ ಮುದ್ದೆಯಂತಿರುವ ನೂರಾರು ಮಕ್ಕಳಿಗೆ ಶಿಕ್ಷಣ ಸಂಸ್ಕೃತಿ ಸಂಸ್ಕಾರ ಕೊಟ್ಟಿದ್ದಾರೆ. ಇದು ಸದಾಕಾಲವೂ ನೆನಪಿನಲ್ಲಿ ಉಳಿಯುತ್ತದೆ. ಅನೇಕ ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಉತ್ತಮ ತಳಪಾಯ ಹಾಕಿ ಕೊಟ್ಟಿದ್ದಾರೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ. ಎಂದು ಶುಭಕೋರಿ ಶಿಕ್ಷಕರ ಜೊತೆಗಿನ ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡರು.
ಸನ್ಮಾನಿತರು ಮಾತನಾಡಿ ಹುಟ್ಟಿದ್ದು ಹೊನ್ನಾವರ ತಾಲೂಕಿನ ವರನಕೇರಿಯಲ್ಲಾದರೂ ಜೀವನದಲ್ಲಿ ಮೂವತ್ತು ವರ್ಷಗಳನ್ನು ಕಂಚಿಕೈನಲ್ಲಿಯೆ ಕಳೆದೆ. ಈ ಊರು ನನಗೆ ಎಲ್ಲವನ್ನೂ ಕೊಟ್ಟಿದೆ. ಇಲ್ಲಿನ ಹಿರಿ ಕಿರಿಯರ ಸಂಸ್ಕಾರ ಜನರ ಪ್ರೀತಿ ಇಲ್ಲಿ ಕಳೆದ ಕ್ಷಣಗಳು ಅತ್ಯಮೂಲ್ಯವಾದದ್ದು. ಈ ಶಾಲೆಯಲ್ಲಿ ಕಲಿತ ಕಲಿಯುತ್ತಿರುವ ಎಲ್ಲರೂ ಒಳ್ಳೆಯ ಶಿಕ್ಷಣ ಪಡೆದು ಜೀವನದಲ್ಲಿ ಮಹತ್ತರವಾದ ಸಾಧನೆಗಳನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಂಚಿಕೈ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸತೀಶ ಹೆಗಡೆ ಕಂಚಿಕೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯಾಧ್ಯಾಪಕಿ ಪ್ರೇಮಾ ನಾಯ್ಕ ಇವರು ಸ್ವಾಗತಿಸಿ ಅನಿಸಿಕೆಗಳನ್ನು ಹಂಚಿಕೊಂಡರು. ಶಾಲೆಗೆ ಹೊಸದಾಗಿ ಬಂದ ಶಿಕ್ಷಕರಾದ ವೆಂಕಟೇಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.