
ಶಿರಸಿ: ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ವತಿಯಿಂದ ಹೆಗಡೆಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯ ಗಣಪತಿ ಹೆಗಡೆ ಮತ್ತು ಅಜ್ಜೀಬಳ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯ ದೇವರು ಹೆಗಡೆ ಇವರು ಸ್ವಾಭಾವಿಕ ಮರಣ ಹೊಂದಿದ್ದು, ಇವರ ವಾರಸುದಾರರಾದ ರಮಾನಂದ ಗಣಪತಿ ಹೆಗಡೆ ಹಾಗೂ ಶ್ರೀಮತಿ ದೇವರು ಹೆಗಡೆ ಇವರಿಗೆ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ರೂ.10,000 ಗಳ ಮೊತ್ತದ ಚೆಕ್‍ನ್ನು ವಿತರಿಸಿದರು.
ಕೆ.ಡಿ.ಸಿ.ಸಿ. ಬ್ಯಾಂಕಿನ ವತಿಯಿಂದ ಹೆಬ್ಬತ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಘದ ಹಾಲು ಉತ್ಪಾದಕರಾದ ಪವನಕುಮಾರ ರವೀಂದ್ರ ನಾಯ್ಕ ಅವರ ಆಕಳು ಮರಣ ಹೊಂದಿದ ಕಾರಣ ಹಾಗೂ ಕೋಡ್ಸರ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಘದ ಹಾಲು ಉತ್ಪಾದಕರಾದ ಶಶಿಕಾಂತ ರಾಮಚಂದ್ರ ಹೆಗಡೆ ಅವರ ಆಕಳು ಮರಣ ಹೊಂದಿದ ಕಾರಣ ತಲಾ ರೂ.8000 ಗಳ ಮೊತ್ತದ ಚೆಕ್‍ನ್ನು ಸಹ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ವತಿಯಿಂದ ನೀಡಲ್ಪಡುವ ಸೌಲಭ್ಯಗಳನ್ನು ಎಲ್ಲ ಹಾಲು ಉತ್ಪಾದಕರು ಪಡೆಯುವಂತಾಗಬೇಕು. ಆದ್ದರಿಂದ ಪ್ರತಿಯೊಬ್ಬ ಹಾಲು ಉತ್ಪಾದಕನೂ ಸಹ ಕಲ್ಯಾಣ ಸಂಘಕ್ಕೆ ತಪ್ಪದೇ ಸದಸ್ಯರಾಗುವಂತೆ ಅವರು ಮನವಿ ಮಾಡಿಕೊಂಡರು. ಹಾಗೆಯೇ ಕೆ,ಡಿ.ಸಿ.ಸಿ. ಬ್ಯಾಂಕ್ ಮಾನ್ಯ ಸಚಿವರಾದ ಶಿವರಾಮ್ ಹೆಬ್ಬಾರ್ ಅವರ ನೇತ್ರತ್ವದಲ್ಲಿ ರೈತಪರವಾಗಿ ಜಿಲ್ಲೆಯ ಎಲ್ಲ ರೈತರ ಹಿತ ಕಾಪಾಡುವಲ್ಲಿ ಅನೇಕ ಕೆಲಸಗಳನ್ನು
ಮಾಡುತ್ತಿದ್ದು, ತನ್ನ ವತಿಯಿಂದ ಜಿಲ್ಲೆಯ ರೈತರಿಗೆ ಸಹಾಯವಾಗುವ ಯಾವುದೇ ಕೆಲಸ ಕಾರ್ಯಗಳನ್ನು ತಪ್ಪದೇ ಮಾಡುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಜ್ಜೀಬಳ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಹರ್ಷ ಹೆಗಡೆ, ಹೆಬ್ಬತ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ವಿನಾಯಕ ನಾಯ್ಕ, ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಮಧುಕೇಶ್ವರ ನಾಯ್ಕ, ಹಾಗೂ ರಮಾನಂದ ಗಣಪತಿ ಹೆಗಡೆ ಮತ್ತು ಮಾರುಕಟ್ಟೆ ಅಧಿಕಾರಿಯಾದ ಬಸವರಾಜ ಸಲೋನಿ, ಶಿರಸಿ ಉಪ ವಿಭಾಗದ ಗುರುದರ್ಶನ ಭಟ್, ದಯಾನಂದ ಬೋರ್ಕರ್, ಅಭಿಷೇಕ ನಾಯ್ಕ ಇವರು ಉಪಸ್ಥಿತರಿದ್ದರು