ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಅನಿವಾರ್ಯ. ಹೋರಾಟವಿಲ್ಲದೇ ಹಕ್ಕು ಸಿಗಲು ಸಾಧ್ಯವಿಲ್ಲ. ಕಾನೂನಾತ್ಮಕ ಮತ್ತು ಸಂಘಟನಾತ್ಮಕ ಹೋರಾಟವನ್ನ ಮುಂದುವರೆಸಿರಿ ಎಂದು ಸಾಮಾಜಿಕ ಚಿಂತಕ ಎಸ್ ಎನ್ ಹೆಗಡೆ ಡೊಡ್ನಳ್ಳಿ ಅವರು ಹೇಳಿದರು. ಅವರು ಇಂದು ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮ ಉದ್ದೇಶಿಸಿ ಉದ್ಘಾಟನೆ ಮಾಡುತ್ತಾ ಮಾತನಾಡಿದರು.
ಮನುಷ್ಯನ ಹಟ್ಟಿನ ಬದುಕಿನ ದಿನಗಳಲ್ಲಿ ಜೀವನಕ್ಕಾಗಿ ಭೂಮಿ ಅತೀ ಅವಶ್ಯ. ಸ್ವಂತಿಕೆಯ ಭೂಮಿಯು ಮಾನವನ ಅಭಿವೃದ್ಧಿಯ ಸಂಕೇತ. ಈ ಸ್ವಂತಿಕೆಯ ಭೂಮಿಗಾಗಿ ಭೂಮಿಯ ಹೋರಾಟ ಅರಣ್ಯವಾಸಿಗಳಿಗೆ ಅನಿವಾರ್ಯ ಎಂದು ಅವರು ಹೇಳಿದರು.
ಸಭೆಯಲ್ಲಿ ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಹೆಗಡೆ ಉಪಸ್ಥಿತರಿದ್ದರು. ನಿರ್ದೇಶಕ ರಾಜು ನರೇಬೈಲ್ ಸ್ವಾಗತಿಸಿದರು. ರಾಮಣ್ಣ ಕಾರ್ಯಕ್ರಮ ನಿರ್ವಹಿಸಿದರು. ಬಶೀರ್ ಸಾಬ, ಗಂಗೂಬಾಯಿ, ಬಂಗರ‍್ಯ ಜೋಗಿ, ತುಕರಾಮ ನರೇಬೈಲ್, ಶೇಖರ್ ಕುಪ್ಪಳ್ಳಿ, ಜಿತೇಂದ್ರ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.
ಹೋರಾಟ ನಿರಂತರ:
ಸುಫ್ರೀಂ ಕೋರ್ಟಿಗೆ ರಾಜ್ಯ ಸರಕಾರ ಪ್ರಮಾಣ ಪತ್ರ ಸಲ್ಲಿಸುವವರೆಗೂ ಅರಣ್ಯವಾಸಿಗಳ ಹೋರಾಟ ನಿರಂತರವಾಗಿರುವುದು, ಅರಣ್ಯವಾಸಿಗಳ ಹಕ್ಕಿಗೆ ಹೋರಾಟಗಾರರ ವೇದಿಕೆಯು ಬದ್ಧವಾಗಿರುತ್ತದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.