ಶಿರಸಿ: ಜಿಲ್ಲೆಯ ಶಾಸಕರು ಸಚಿವರು ಒಪ್ಪಿಗೆ ಸೂಚಿಸಿದರೆ ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಲಾಗುವುದು ಎಂದು ಸಹಕಾರ ಇಲಾಖೆ ಸಚಿವ ಎಸ್ ಟಿ ಸೋಮಶೇಖರ ಹೇಳಿದರು.
ತಾಲೂಕಿನ ಹನುಮಂತಿಯಲ್ಲಿ ಸಾರ್ವಜನಿಕ – ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಅಡಿಯಲ್ಲಿ ಧಾರವಾಡ ಹಾಲು ಒಕ್ಕೂಟ ನಿರ್ಮಿಸಿರುವ ಹಾಲು ಪ್ಯಾಕಿಂಗ್ ಘಟಕವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಧಾರವಾಡ ಒಕ್ಕೂಟದಿಂದ ಹಾವೇರಿ ಪ್ರತ್ಯೇಕವಾಗಿದೆ. ಉತ್ತರ ಕನ್ನಡವೂ ಸ್ವಂತ ಒಕ್ಕೂಟವಾಗಲು ಸಹಕಾರ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅಭಿಪ್ರಾಯ ಪಡೆದು ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಪ್ರಯತ್ನ ನಡೆಸಲಾಗುವುದು ಎಂದರು.
ರಾಜ್ಯದ ಡಿಸಿಸಿ ಬ್ಯಾಂಕ್ ಗಳು ಸ್ವಂತವಾಗಿ ಬೆಳೆದಂತೆ ನಂದಿನಿ ಯೂನಿಯನ್ ಗಳೂ ತಮ್ಮ ಸ್ವ ಪ್ರಯತ್ನದಿಂದ ಬೆಳೆಯಲು ಯತ್ನಿಸಬೇಕು. ಹಾಲು ಉತ್ಪಾದಕರ ಆದಾಯ ಜಾಸ್ತಿ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ ಕನಸೂ ಆಗಿದೆ. ಈಗಾಗಲೇ ಹಾನಿಯಲ್ಲಿರುವ ಡಿಸಿಸಿ ಬ್ಯಾಂಕ್ ಗಳಿಗೆ ಆಪರೇಶನ್ ಮಾಡಿದ್ದರಿಂದ ಎಲ್ಲ ಬ್ಯಾಂಕ್ ಗಳು ಲಾಭದೆಡೆ ಸಾಗುತ್ತಿವೆ. ಅದೇ ರೀತಿ ಒಂದು ಪಂಚಾಯಿತಿಗೆ ಒಂದು ಕೃಷಿ ಪತ್ತಿನ ಸಂಘ ಇದ್ದರೆ ಮಾತ್ರ ಲಾಭದಾಯಕವಾಗಿ ಹೋಗಲು ಸಾಧ್ಯ ಎಂದರು.
ಸಾಲ ಮನ್ನಾ 167 ಕೋಟಿ ರೂ. ಸಾಲ ಮನ್ನಾ ಹಣ ಶೀಘ್ರ ಬಿಡುಗಡೆ ಆಗಲಿದೆ. ಸಾಲ ಮನ್ನಾಕ್ಕೆ ಬೇಕಾಗಿರುವ ದಾಖಲೆಗಳನ್ನು ಪೂರೈಸದ ಕಾರಣ ಇನ್ನೂ 15 ಸಾವಿರ ಜನಕ್ಕೆ ಈ ಸೌಲಭ್ಯ ತಲುಪಿಲ್ಲ. ಸಾಲ ಮನ್ನಾ ಕುರಿತಂತೆ ಹಲವು ದೂರುಗಳು ಬಂದಿದ್ದವು. ಕೃಷಿಕರಲ್ಲದವರ ಹೆಸರಿನಲ್ಲಿಯೂ ಸಾಲ ಪಡೆಯಲಾಗುತ್ತಿತ್ತು ಎನ್ನುವ ಅಂಶ ಬೆಳಕಿಗೆ ಬರುತ್ತಿದೆ. ಹೀಗಾಗಿ ಡಿಸಿಸಿ, ಅಪೆಕ್ಸ್ ಬ್ಯಾಂಕ್ ಸೇರಿದಂತೆ ಒಂದೇ ತಂತ್ರಾಂಶ ಬಳಕೆ ಮಾಡಲಾಗುತ್ತಿದೆ ಎಂದ ಅವರು, ಯಶಸ್ವಿನಿ ಮರು ಜಾರಿಗೆ ಸಾರ್ವಜನಿಕರ ಆಗ್ರಹ ಜಾಸ್ತಿ ಇದೆ. ಯಶಸ್ವಿನಿಯ ನಿಯಮಗಳನ್ಬು ಸರಳಗೊಳಿಸಲಾಗಿದ್ದು, ಇನ್ನು 15 ದಿನಗಳಲ್ಲಿ ಈ ಯೋಜನೆ ಪುನರಾರಂಭಿಸಲಾಗುವುದು ಎಂದರು.
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಸರಳತೆಯಿಂದಲೇ ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿದ್ದಾರೆ. ಕಾಗೇರಿಯವರ ಪ್ರಾಮಾಣಿಕ ವ್ಯಕ್ತಿತ್ವ ಎಲ್ಲರೂ ಒಪ್ಪುವಂತಿದೆ. ಚುನಾವಣೆಗೆಂದು ಹಣ ಖರ್ಚೇ ಮಾಡದೇ ಆರಿಸಿ ಬರುವ ರಾಜಕಾರಣಿ ವಿಶ್ವೇಶ್ವರ ಹೆಗಡೆ ಕಾಗೇರಿ. ಅವರು ತಮ್ಮ ಮತದಾರರಿಗೆ ಕಾರ್ಯಕರ್ತರಿಗೆ ಒಂದು ಚಹಾ ಕುಡಿಸಲ್ಲ, ಆದರೂ ಅವರ ಪ್ರಾಮಾಣಿಕತೆಯಿಂದ ಜನರೇ ಆರಿಸಿ ಕಳಿಸುತ್ತಾರೆ. ಆದರೆ ಈ ಹಿಂದೆ ವಿಧಾನ ಸಭಾಧ್ಯಕ್ಷರ ಪೀಠದಲ್ಲಿ ಕುಳಿತವರು ಸತ್ಯಹರಿಶ್ಚಂದ್ರನ ತುಂಡಿನಂತೆ ತಮ್ಮನ್ನು ಬಿಂಬಿಸುತ್ತಿದ್ದರು. ಆದರೆ ಅವರು ಪ್ರಮಾಣಿಕತೆ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ ಎಂದು ಹಾಸ್ಯದ ಚಟಾಕಿ ಹಾರಿಸಿದರು.
ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಉತ್ತರ ಕನ್ನಡದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹಾಲು ಉತ್ಪಾದನೆಯಾಗುತ್ತಿಲ್ಲ. ಘಟ್ಟದ ಮೇಲಿನ ಪ್ರದೇಶದಲ್ಲಿ ಅತ್ಯುತ್ತಮ ಹಾಲು ಉತ್ಪಾದನೆಯಾಗುತ್ತಿದೆ. ಅದರಲ್ಲೂ ಶಿರಸಿ ಸಿದ್ದಾಪುರ, ಯಲ್ಲಾಪುರವೇ ಹಾಲು ಉತ್ಪಾದನೆಯ ಪ್ರಮುಖ ಪಾತ್ರ ವಹಿಸಿದೆ. ಆದರೆ ಕರಾವಳಿ ಬಾಗದಲ್ಲಿ ಹಾಲು ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಉತ್ತರ ಕನ್ನಡಕ್ಕೆ ಪ್ರತ್ಯೇಕ ಒಕ್ಕೂಟ ಆಗಬೇಕು. ಹೀಗಾಗಿ, ಪ್ರತಿ ದಿನ ಕನಿಷ್ಠ 1 ಲಕ್ಷ ಲೀ. ಹಾಲು ಉತ್ಪಾದನೆ ಮಾಡುವಲ್ಲಿ ರೈತರು ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲೆಯಲ್ಲಿ ಹಾಲು ಉತ್ಪಾದನೆಯಲ್ಲಿಯೂ ಹೆಚ್ಚಿನ ಪ್ರಗತಿ ಕಾಣಬೇಕು. ಸ್ವದೇಶ ಥಳಿಯ ಆಕಳುಗಳನ್ನು ಸಾಕುವ ಸಂಖ್ಯೆ ಹೆಚ್ಚಳವಾಗಬೇಕು. ಈ ಮೂಲಕ ಗುಣ ಮಟ್ಟದ ಹಾಲು ಉತ್ಪಾದನೆಯಾಗಬೇಕು. ಗುಣಮಟ್ಟದ ಹಾಲು ಉತ್ಪಾದನೆ ಮೂಲಕ ತಿರಸ್ಕಾರ ಆಗುವ ಪ್ರಮಾಣ ಕಡಿಮೆ ಆಗಬೇಕು ಎಂದರು.
ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಪ್ರಾಸ್ತಾವಿಕ ಮಾತನಾಡಿ, ಪ್ರತಿ ದಿನ ೧.೩೫ ಲಕ್ಷ ಲೀ. ಹಾಲು ಸಂಗ್ರಹಣೆ ಧಾರವಾಡ ಒಕ್ಕೂಟದಲ್ಲಿ ಆಗುತ್ತಿದೆ. ಉತ್ತರ ಕನ್ನಡದಲ್ಲಿ ೪೫ ಸಾವಿರ ಲೀ. ಹಾಲು ಪ್ರತಿ ದಿನ ಸಂಗ್ರಹ ಆಗುತ್ತಿದೆ. ಈ ಪ್ಯಾಕಿಂಗ್ ಘಟಕದಿಂದ ಗ್ರಹಕರಿಗೆ ತಾಜಾ ಹಾಲು ನೀಡಲು ಸಾಧ್ಯವಾಗುತ್ತದೆ. ಜೊತೆಗೆ ಹಾಲು ಸಾಗಣಾ ವೆಚ್ಛ ಉಳಿಯುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಇದಕ್ಕೂ ಮುನ್ನ ಗೋಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ ಸ್ವಾಗತಿಸಿದರು. ನಿರ್ದೇಶಕರಾದ ನೀಲಕಂಠಪ್ಪ ಅಸೂಟಿ, ಶಂಕರ ಹೆಗಡೆ, ಪಿ ಬಿ ಸತೀಶ, ಸಹಾಯಕ ಆಯುಕ್ತ ದೇವರಾಜ, ಗ್ರಾ ಪಂ ಅಧ್ಯಕ್ಷ ಪ್ರಶಾಂತ ಗೌಡರ ಇತರರಿದ್ದರು.