ಶಿರಸಿ: ತಾಲೂಕಿನ ಹನುಮಂತಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ನಂದಿನಿ ಹಾಲಿನ ಪ್ಯಾಕಿಂಗ್ ಘಟಕವು ಏ.5 ರಂದು ಉದ್ಘಾಟನೆಗೊಳ್ಳಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಇದು ನಿರ್ಮಾಣವಾಗಿದ್ದು, ಇನ್ನು ಮುಂದೆ ಜಿಲ್ಲೆಯ ಹಾಲಿನ ಪ್ಯಾಕಿಂಗ್ ಇಲ್ಲೇ ನಡೆಯಲಿದೆ.
ಈ ಕುರಿತು ಹನುಮಂತಿಯ ಘಟಕದಲ್ಲಿ ಭಾನುವಾರ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿಯವರ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ ಇದು ನಿರ್ಮಾಣವಾಗಲಿದೆ. ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಿಸಿ 15 ವರ್ಷಗಳ ಕಾಲ ಗುತ್ತಿಗೆ ನೀಡಲಾಗಿದ್ದು, ಪ್ಯಾಕಿಂಗ್ ಗೆ 4 ರೂ. ನಂತೆ ಅವರಿಗೆ ನೀಡಲಾಗುವುದು ಎಂದರು.
ಏ.5ರಂದು ಬೆಳಗ್ಗೆ 11 ಗಂಟೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಶಿರಸಿ ಡೇರಿ ಉದ್ಘಾಟಿಸುವರು. ಹಾಲು ಸಂಸ್ಕಾರಣಾ ವಿಭಾಗವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಹಾಲು ಪ್ಯಾಕಿಂಗ್ ವಿಭಾಗವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸುವರು. ತುಪ್ಪದ ಉತ್ಪಾದನಾ ವಿಭಾಗವನ್ನು ಕೆ.ಎಂ.ಎಫ್. ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಬಿ.ಸಿ.ಪಾಟೀಲ, ಪ್ರಭು ಚೌಹಾಣ, ಸಿ.ಸಿ.ಪಾಟೀಲ, ಹಾಲಪ್ಪ ಆಚಾರ, ಶಂಕರ ಪಾಟೀಲ ಮುನೇನಕೊಪ್ಪ ಇತರರು ಉಪಸ್ಥಿತರಿರುವರು ಎಂದರು.
ಘಟಕದ ಸ್ಥಾಪನೆಯಿಂದ ಜಿಲ್ಲೆಯ ಹಾಲು ಉತ್ಪಾದಕರ ರೈತರು ಹೈನುಗಾರಿಕೆಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಪೂರಕವಾದ ವಾತಾವರಣ ನಿರ್ಮಾಣಗೊಂಡಿದೆ. ಜಿಲ್ಲೆಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಶುದ್ಧ ತಾಜಾ ಹಾಲನ್ನು ಸರಬರಾಜು ಮಾಡಲು ಸಹಕಾರಿಯಾಗಿದ್ದು, ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರುಕಟ್ಟೆಯನ್ನೂ ಸಹ ಅಭಿವೃದ್ಧಿಪಡಿಸಲು ಅನುಕೂಲಕರವಾಗುತ್ತದೆ ಎಂದು ಹೇಳಿದರು.
ಹಾಲು ಒಕ್ಕೂಟದ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ 265 ಕಾರ್ಯನಿರತ ಹಾಲು ಉತ್ಪಾದಕರ ಸಹಕಾರ ಸಂಘಗಳು ಇದ್ದು, 27,425 ಸದಸ್ಯ ರೈತ ಕುಟುಂಬಗಳಿಂದ ಸರಾಸರಿ 45 ಸಾವಿರ ಕೆ.ಜಿ. ಹಾಲು ಶೇಖರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ದಿನವಹಿ ಅಂದಾಜು 40 ಸಾವಿರ ಲೀಟರ್ ಹಾಲು ಹಾಗೂ 5 ಸಾವಿರ ಕೆ.ಜಿ. ಮೊಸರು ಮತ್ತು ಇತರೆ ನಂದಿನಿ ಉತ್ಪನ್ನಗಳ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಖರಣೆಯಾದ ಹಾಲನ್ನು ಧಾರವಾಡದ ಮುಖ್ಯ ಡೇರಿಗೆ ಸಾಗಾಣಿಕೆ ಮಾಡಿ, ಸಂಸ್ಕರಿಸಿ, ನಂತರ ಉತ್ತರಕನ್ನಡ ಜಿಲ್ಲೆಯ ಮಾರುಕಟ್ಟೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಜಿಲ್ಲೆಯಿಂದ ಹಾಲನ್ನು ಧಾರವಾಡಕ್ಕೆ ಸಾಗಾಣಿಕೆ ಮಾಡಿ, ಸಂಸ್ಕರಿಸಿದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉತ್ತರ ಕನ್ನಡ ಜಿಲ್ಲೆಯ ಬೇರೆ ಬೇರೆ ನಗರ ಪಟ್ಟಣಗಳಿಗೆ ಸಾಗಾಣಿಕೆ ಮಾಡಲು ಅನಾವಶ್ಯಕವಾಗಿ ಹೆಚ್ಚಿನ ಸಮಯ ಹಾಗೂ ಸಾಗಾಣಿಕೆ ವೆಚ್ಚವನ್ನು ಒಕ್ಕೂಟವು ಭರಿಸಬೇಕಾಗುತ್ತಿತ್ತು. ಪ್ರತಿ ವರ್ಷ ಒಕ್ಕೂಟದಿಂದ ಅನಾವಶ್ಯಕವಾಗಿ ಅಂದಾಜು 2.50 ಕೋಟಿ ರೂ.ಗಳಷ್ಟು ಹಣವನ್ನು ಹಾಲಿನ ಸಾಗಾಣಿಕೆಗಾಗಿ ವೆಚ್ಚ ಮಾಡಲಾಗುತ್ತಿತ್ತು. ಅಲ್ಲದೇ, ಹೆಚ್ಚಿನ ಸಾಗಾಣಿಕೆ ವೇಳೆಯಿಂದ ಹಾಲು ತನ್ನ ನೈಸರ್ಗಿಕ ತಾಜಾತನವನ್ನು ಕಳೆದುಕೊಳ್ಳುತ್ತಿತ್ತು. ಆದ್ದರಿಂದ, ಸಾರಿಗೆ ವೆಚ್ಚ ನಿಯಂತ್ರಿಸಲು ಹಾಗೂ ಗ್ರಾಹಕರಿಗೆ ಗುಣಮಟ್ಟದ ತಾಜಾ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುವ ದೃಷ್ಟಿಯಿಂದ ಈ ಪ್ಯಾಕಿಂಗ್ ಘಟಕ ನಿರ್ಮಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ, ಶಂಕರ ಹೆಗಡೆ, ಒಕ್ಕೂಟದ ಎಂ.ಡಿ ಕೆ.ಎಂ.ಲೋಹಿತೇಶ್ವರ, ವಿರೇಶ ತರಲಿ ಇದ್ದರು.