ಶಿರಸಿ: ತಾಲೂಕಿನ ಭೈರುಂಬೆ ಹುಳಗೋಳ ಸೇವಾ ಸಹಕಾರಿ ಸಂಘದಲ್ಲಿ ಗ್ರಾಹಕರ ಹಾಗೂ ಸುತ್ತಮುತ್ತಲ ಊರಿನ ನಾಗರಿಕರ ಅನುಕೂಲಕ್ಕಾಗಿ ವಾಹನ ಧೂಮ ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ.
ತಪಾಸಣಾ ಕೇಂದ್ರವನ್ನು ರಿಬ್ಬನ್ ಕತ್ತರಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಶಿರಸಿ ಪ್ರಾದೇಶಿಕ ಸಾರಿಗೆ ಇಲಾಖೆಯ ಆರ್.ಟಿ.ಓ. ಸಿ.ಡಿ.ನಾಯ್ಕ ಮಾತನಾಡಿ, ಹಳ್ಳಿ ಹಳ್ಳಿಯ ಕೇಂದ್ರ ಭಾಗದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಅಲ್ಲಲ್ಲಿಯ ಗ್ರಾಹಕರ ಬೇಡಿಕೆಗಳನ್ನು ಪೂರೈಸುವಲ್ಲಿ ಕಾರ್ಯೋನ್ಮುಖವಾಗುತ್ತಿರುವ ಉದ್ದೇಶ ನಿಜಕ್ಕೂ ಶ್ಲಾಘನೀಯವಾಗಿದೆ. ಜನಸಂಖ್ಯೆ ಹೆಚ್ಚಾದ ಹಾಗೆ ಇಂದು ವಾಹನ ಸಂಖ್ಯೆ ಕೂಡಾ ಹೆಚ್ಚಳಗೊಳ್ಳುತ್ತಿರುವುದು ಸಹಜವಾಗಿದ್ದು ಆ ವಾಹನಗಳಿಂದಾಗುವ ಮಾಲಿನ್ಯವಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಕೂಡಾ ಸಾಮಾನ್ಯ ಜನರ ಲಕ್ಷ್ಯದಲ್ಲಿರಬೇಕು. ತನ್ಮೂಲಕ ಪ್ರತಿಯೊಬ್ಬ ವ್ಯಕ್ತಿ ತನ್ನ ಸಾಮಾಜಿಕ ಕಳಕಳಿಯನ್ನು ತಳೆದಾಗ ಮುಂದೊಂದು ದಿನ ಆಗುವ ದೊಡ್ಡ ಅನಾಹುತ ತಪ್ಪಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹುಳಗೋಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆಶಿನ್ಮನೆ ವಿಶ್ವೇಶ್ವರ ಸೀತಾರಾಮ ಹೆಗಡೆ ಮಾತನಾಡಿ ಕೃತಜ್ಞತೆ ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ರಘುಪತಿ ಶಿವರಾಮ ಭಟ್ಟ ನಿಡಗೋಡ, ಸ್ವರ್ಣವಲ್ಲಿ ಸಂಸ್ಥಾನದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಸೊಸೈಟಿಯ ಸದಸ್ಯ ಶಾಂತಾರಾಮ ಹೆಗಡೆ, ತಪಾಸಣಾ ಕೇಂದ್ರ ಸ್ಥಾಪನೆಗೆ ಮುತುವರ್ಜಿ ವಹಿಸಿದ ನಾಗರಾಜ ಹೆಗಡೆ ಬೊಮ್ನಳ್ಳಿ ಉಪಸ್ಥಿತರಿದ್ದರು.
ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಜಿ.ಎಂ.ಹೆಗಡೆ ಮಾತ್ನಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.