ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಯ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದಿಂದ ನೆಮ್ಮದಿ ಸಿಕ್ಕಿದೆ. ಯೋಜನೆಯನ್ನು ಸರ್ಕಾರ ಕೈಬಿಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಹೇಳಿದ್ದಾರೆ.
ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಸೇರಿದಂತೆ ಅನೇಕ ಸಂಘ-ಸoಸ್ಥೆಗಳು ಸರ್ಕಾರಕ್ಕೆ ಹಲವಾರು ಬಾರಿ ಮನವಿ ನೀಡಿದ್ದವು. ಆದರೆ, ಸರ್ಕಾರ ಯೋಜನೆ ರದ್ದು ಮಾಡುವ ಒಲವು ತೋರಲಿಲ್ಲ. ಅಂತಿಮವಾಗಿ ಮೀನುಗಾರರು ಕೋರ್ಟ್ ಮೊರೆ ಹೋಗಬೇಕಾಯಿತು. ವಾಣಿಜ್ಯ ಬಂದರು ವಿಸ್ತರಣೆ ಯೋಜನೆಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು, ಮೀನುಗಾರರು ಮತ್ತು ಸಂಘಟನೆಗಳಿಗೆ ಸಣ್ಣ ಜಯ ಸಿಕ್ಕಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೀನುಗಾರರ ಪರವಾಗಿ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ ಸುಪ್ರೀಂಕೋರ್ಟ್ನ ಹಿರಿಯ ವಕೀಲರಾಗಿರುವ ಕಾರವಾರದ ದೇವದತ್ ಕಾಮತ್, ಮೂರ್ತಿ ಡಿ. ನಾಯ್ಕ ಮತ್ತು ಅಮಿತ್ ಪೈ ಅವರಿಗೆ ಮತ್ತು ಪ್ರಕರಣವನ್ನು ಸುಪ್ರೀಂಕೋರ್ಟ್ಗೆ ಒಯ್ಯಲು ಎಲ್ಲಾ ರೀತಿಯ ಸಹಕಾರ ನೀಡಿದ ಮಾಜಿ ಶಾಸಕ ಸತೀಶ್ ಸೈಲ್ ಅವರಿಗೆ ರಾಜು ತಾಂಡೇಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ವಾಣಿಜ್ಯ ಬಂದರು ವಿಸ್ತರಣೆಗೆ ಸುಪ್ರೀಂಕೋರ್ಟ್ನಿoದ ತಾತ್ಕಾಲಿಕ ಸ್ಥಗಿತದ ಆದೇಶ ನೆಮ್ಮದಿ ತಂದಿದೆ; ರಾಜು ತಾಂಡೇಲ್
