
ಶಿರಸಿ: ದೇಶ ಸೇವೆಗೈಯುವ ಯುದ್ಧದ ಸಮಯದಲ್ಲಿ ಹುತಾತ್ಮರಾದ ಸೈನಿಕರ ಗೌರವಾರ್ಥ ನಗರದ ಮರಾಠಿಕೊಪ್ಪದಲ್ಲಿರುವ ಉದ್ಯಾನದಲ್ಲಿ ಅಮರ ಜವಾನ್ ಸ್ಮಾರಕ' (ಹುತಾತ್ಮರ ಸ್ಮಾರಕ) ಸ್ಥಾಪನೆಗೊಳ್ಳುತ್ತಿದೆ. ಜಿಲ್ಲೆಯಲ್ಲೇ ಇದು ಮೊದಲ ಹುತಾತ್ಮ ಸ್ಮಾರಕವಾಗಿದ್ದು, ಕಾರ್ಕಳದಲ್ಲಿ ನಿರ್ಮಿತವಾದ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ. ಉದ್ಯಾನದ ಪ್ರವೇಶದ್ವಾರದ ಬಳಿ ಸ್ಮಾರಕ ನಿರ್ಮಾಣ ಕೆಲಸ ಈಗಾಗಲೆ ಆರಂಭಗೊಂಡಿದೆ. ಜುಲೈ ತಿಂಗಳ ಅಂತ್ಯಕ್ಕೆ ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿವೇದಿತ ಆಳ್ವಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮರಾಠಿಕೊಪ್ಪದಲ್ಲಿ ಉದ್ಯಾನ ನಿರ್ಮಾಣ ಯೋಜನೆಗೆ-40 ಲಕ್ಷ ಅನುದಾನ ಒದಗಿಸಿದ್ದರು. ಇಲ್ಲಿ ಅಮರ ಜವಾನ ಸ್ಮಾರಕ ಸ್ಥಾಪನೆಯಾಗಬೇಕು ಎಂದು ಸೂಚಿಸಿದ್ದರು. 2016-17ನೇ ಸಾಲಿನಲ್ಲಿ ಈ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದರೂ, ಅನುದಾನ ಬಿಡುಗಡೆಯಾಗಿರಲಿಲ್ಲ. ಕಳೆದ ವರ್ಷದ ಮಾರ್ಚ್ ವೇಳೆಗೆ ಬಾಕಿ ಉಳಿದಿದ್ದ ಅನುದಾನ ಮಂಜೂರಾಗಿತ್ತು. ಹದಿನೈದು ದಿನಗಳಿಂದ ಕೆಲಸ ಆರಂಭಿಸಲಾಗಿದೆ. ತಳಗೋಡೆ ನಿರ್ಮಿಸಿ, ಸ್ಮಾರಕದ ಸ್ಥಂಭ ನಿರ್ಮಾಣ ಕೆಲಸ ಚುರುಕಾಗಿ ನಡೆಯುತ್ತಿದೆ.
ಉದ್ಯಾನದಲ್ಲಿ ಬಾಕಿ ಉಳಿದಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು-15 ಲಕ್ಷ ಅನುದಾನ ಪ್ರಾಧಿಕಾರದಿಂದ ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ಅಮರ ಜವಾನ್ ಸ್ಮಾರಕ' ನಿರ್ಮಿಸಲಾಗುತ್ತಿದೆ. ಜತೆಗೆ ಹೈಮಾಸ್ಟ್ ದೀಪ ಅಳವಡಿಕೆ, ಇನ್ನಿತರ ಅಭಿವೃದ್ಧಿ ಕೆಲಸ ನಡೆಸಲಾಗುತ್ತದೆ' ಎಂದು ಕೆ.ಆರ್.ಐ.ಡಿ.ಎಲ್. ಎಇಇ ಡಿ.ಎಲ್.ನಾಯ್ಕ ತಿಳಿಸಿದರು.
ಕಾರ್ಕಳದಲ್ಲಿ ಪ್ರಾಧಿಕಾರದಿಂದ ನಿರ್ಮಾಣವಾದ ಉದ್ಯಾನವನದಲ್ಲಿ ಸ್ಮಾರಕ ಸ್ಥಾಪಿಸಲಾಗಿತ್ತು. ಅಲ್ಲಿಗೆ ಭೇಟಿ ನೀಡಿ ಸ್ಮಾರಕದ ಮಾಹಿತಿ ಪಡೆದಿದ್ದೇವೆ. ಅದೇ ಮಾದರಿ ಇಲ್ಲಿ ಸಿದ್ಧಗೊಳ್ಳಲಿದೆ. ವಿಶೇಷ ಗ್ರ್ಯಾನೈಟ್ ಬಳಸಿ ವಿಜಯ ಸ್ಥಂಭ ನಿರ್ಮಾಣಗೊಳ್ಳಲಿದೆ’ ಎಂದರು.
ವೀರ ಯೋಧರಿಗೆ ಗೌರವ ಸಮರ್ಪಿಸುವ ಸ್ಮಾರಕ ನಗರದಲ್ಲಿ ಈವರೆಗೆ ಇರಲಿಲ್ಲ. ವಿಶೇಷ ಸಂದರ್ಭಗಳಲ್ಲಿ ಗೌರವ ಸಮರ್ಪಿಸಲು ಸ್ಮಾರಕ ನಿರ್ಮಾಣವಾಗುತ್ತಿರುವುದು ಸಂತಸವಾಗಿದೆ ಎಂದು ಹಲವು ನಿವೃತ್ತ ಸೈನಿಕರು ಅಭಿಪ್ರಾಯಿಸಿದ್ದಾರೆ.
ಶಾಶ್ವತ ಸ್ಮಾರಕವಾಗಲಿ: `ಶಿರಸಿಯಲ್ಲಿ ಮೊದಲ ಬಾರಿಗೆ ಸ್ಥಾಪನೆಗೊಳ್ಳುತ್ತಿರುವ ಅಮರ ಜವಾನ್ ಸ್ಮಾರಕ ಇಡೀ ಜಿಲ್ಲೆಗೆ ಮಾದರಿಯಾಗಬೇಕು. ಗುಣಮಟ್ಟದ ಕೆಲಸ ನಡೆಯಬೇಕು. ಸ್ಮಾರಕ ಸೈನಿಕರಿಗೆ ಗೌರವ ಅರ್ಪಿಸಲಷ್ಟೇ ಅಲ್ಲದೆ, ದೇಶದ ಸೈನ್ಯಕ್ಕೆ ಸೇರುವವರನ್ನು ಹುರಿದುಂಬಿಸುವಂತರಿಬೇಕು’ ಎಂದು ನಿವೃತ್ತ ಸೈನಿಕರಾದ ರಘುವೀರ ಜಿ.ನಾಯ್ಕ, ಫೆಡ್ರಿಕ್ ಹೇಳಿದರು.