ಶಿರಸಿ: ತಾಲ್ಲೂಕಿನ ಸುಧಾಪುರ ಕ್ಷೇತ್ರದಲ್ಲಿಯ ಸಂಕಟಹರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಪ್ರಭಾವಳಿ -ತುಳಸಿಹಾರ ಹಾಗೂ ಶಂಕಚಕ್ರ ದೀಪ ಸಮರ್ಪಣೆ ಕಾರ್ಯಕ್ರಮ ವಿದ್ಯುಕ್ತವಾಗಿ ಜರುಗಿತು.
ರಾಮಚಂದ್ರ ಶಾಸ್ತ್ರಿಗಳು ಕೋಣೆಸರ ಇವರ ನೇತೃತ್ವದಲ್ಲಿ ಗೌರವ ಅರ್ಚಕ ಪ್ರಸನ್ನ ಹೆಗಡೆ ವಾಜಗದ್ದೆ ಅವರ ಸಹಕಾರದೊಂದಿಗೆ ಮುಂಜಾನೆ ಗಣಪತಿ ಪೂಜೆ ಪಂಚಗವ್ಯ ಹವನಗಳೊಂದಿಗೆ ಪ್ರಭಾವಳಿ ಶುದ್ಧೀಕರಣ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು.
ಮಧ್ಯಾಹ್ನ ಹನ್ನೊಂದು ಮೂವತ್ತಕ್ಕೆ ಶ್ರೀ ದೇವರಿಗೆ ಪ್ರಭಾವಳಿಯನ್ನು ಸಮರ್ಪಿಸಲಾಯಿತು. ಪ್ರಭಾವಳಿಯನ್ನು ನಾಗರಾಜ್ ಜೋಶಿ ದಂಪತಿ ಸಮರ್ಪಿಸಿದರು. 108 ತುಳಸಿಮಣಿ ಹಾರ ಇದಕ್ಕೆ ಬೆಳ್ಳಿ ಕವಚದ ಸೂರ್ಯ ಸಾಲಿಗ್ರಾಮದ ಪದಕ ಸಹಿತ ತುಳಸಿ ಹಾರವನ್ನು ಮತ್ತು ಉತ್ತರಪ್ರದೇಶದಲ್ಲಿ ಘಡದಲ್ಲಿ ವಿಶೇಷ ಕೋರಿಕೆಯ ಮೇರೆಗೆ ತಜ್ಞರಿಂದ ಶಾಸ್ತ್ರೋಕ್ತವಾಗಿ ತಯಾರಿಸಿದ ಶಂಖಚಕ್ರ ಸಹಿತ ಬೆಂಗಳೂರಿನ ವಾಜೇಂದ್ರ ಮಸಲೀಕರ್ ಸಮರ್ಪಿಸಿದರು .ಇದು ವಿಷ್ಣುವಿಗೆ ಪ್ರಿಯವಾದ ಶಂಖಚಕ್ರಗಳೊಂದಿಗೆ ಪ್ರತಿ ದೀಪದ ಕಂಬಗಳಿಗೆ ನಾಲ್ಕು ನವಿಲುಗಳ ಆಧಾರದ ಅತ್ಯಂತ ಅಪರೂಪವಾದ ದೀಪವಾಗಿದೆ. ಭಕ್ತರ ಪೂಜೆಯನ್ನು ಸ್ವೀಕರಿಸಿದ ಮಹಾವಿಷ್ಣು ಸಂಪ್ರೀತನಾಗಿ ವರ್ಷಧಾರೆಯ ಮೂಲಕ ಆಸ್ತಿಕರನ್ನು ಹರಸಿದ್ದು ವಿಶೇಷವಾಗಿತ್ತು.