ಹುಬ್ಬಳ್ಳಿ :ವಿದ್ಯಾನಗರದ ವಿವೇಕಾನಂದ ರಾಮಕೃಷ್ಣ ಆಶ್ರಮ ಸಭಾಭವನದಲ್ಲಿ ಜನನಿ ಮ್ಯೂಸಿಕ್ ಸಂಸ್ಥೆಶಿರಸಿ ಶಾಖೆ ಹುಬ್ಬಳ್ಳಿ ಇವರಿಂದ ಸ್ವರಜತಿ ಸಂಗೀತ ಮತ್ತು ಭಾವಾಭಿನಯ ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳು ತಲೆದೂಗಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹುಬ್ಬಳ್ಳಿ ಶ್ರೀ ರಘುವೀರಾನಂದಜಿ ಮಹಾರಾಜ ಸ್ವಾಮಿಗಳು ಮಾತನಾಡಿ ಸಂಗೀತವೆಂಬುದು ದೇವರನ್ನು ತಲುಪಲು ಸ್ತೋತ್ರ ಮಂತ್ರಗಳಂತೆ ಇರುವ ಮತ್ತೊಂದು ಉನ್ನತ ಮಾರ್ಗ ಮತ್ತು ಸಂಗೀತದಲ್ಲಿ ಶಾಸ್ತ್ರಜ್ಞಾನ ಪಡೆದುಕೊಂಡು ಹಾಡಿದಾಗಮಾತ್ರ ದೇವರನ್ನು ಕಾಣಲು ಸಾಧ್ಯ. ಸಂಗೀತವೆಂಬುದು ಬರೀ ಹಾಡುಗಾರಿಕೆ ಮಾತ್ರವಲ್ಲದೆ ಗಾಯನ ವಾದನ ನರ್ತನ ಇವು ಮೂರನ್ನು ಒಳಗೊಂಡಿರುವ ಕಾರಣ ಗಾಯನ ಹಾಗೂ ವಾದನ ಮತ್ತು ನೃತ್ಯ ಭಂಗಿಯನ್ನು ಒಳಗೊಂಡಿರುವ ಈ ಸಂಗೀತ ಸ್ವರಜತಿಭಾವಾಭಿನಯ ಕಾರ್ಯಕ್ರಮವು ಅರ್ಥಪೂರ್ಣವಾಗಿ ಆಯೋಜನೆಗೊಂಡಿದೆ ಎಂದು ನುಡಿದರು.
ಇಂದಿನ ಯುವ ಪೀಳಿಗೆಯು ಪಾಶ್ಚಾತ್ಯ ಸಂಗೀತ ಮತ್ತು ಇನ್ನಿತರೆ ಮನಸ್ಸನ್ನು ಕಲಕುವ ಇನ್ನಿತರೆ ವಿಷಯಗಳಿಗೆ ಮರುಳಾಗದೆ ಪುನಃ ನಮ್ಮ ಸನಾತನ ಸಂಸ್ಕøತಿಯೆಡೆಗೆ ಮರಳಿಸುವಲ್ಲಿ ಈ ಸಂಗೀತವು ಮಹತ್ವದ ಪಾತ್ರವನ್ನು ವಹಿಸುತ್ತ ಇದೆ.ಸ್ವಾಮಿ ವಿವೇಕಾನಂದರವರು ಒಮ್ಮೆ ಮಾತಿನ ಸಂದರ್ಭದಲ್ಲಿ ತಾಯಿ ರಾಜರಾಜೇಶ್ವರಿಯ ಮಂಪರಿನಲ್ಲಿದ್ದಾಗ ಒಂದು ನೂರು ವರ್ಷಗಳ ಕಾಲ ಪರಕೀಯರ ಆಳ್ವಿಕೆಗೆ ಒಳಪಡುವ ಸಂದರ್ಭ ಒದಗಿ ಬಂದಿದ್ದು ಇನ್ನು ಮುಂದೆ ಇಂತಹ ಯಾವುದೇ ದಬ್ಬಾಳಿಕೆಯು ನಮ್ಮ ಸಂಸ್ಕøತಿಯ ಮೇಲೆ ಯಾವುದೇ ಪ್ರಭಾವವನ್ನು ಬೀರದಂತೆ ಸಂಗೀತ ಸಾಹಿತ್ಯ ನೃತ್ಯ ಮುಂತಾದ ಕಲೆಗಳ ಇರುವಿಕೆಯಿಂದ ಸನಾತನ ಸಂಸ್ಕøತಿಯನ್ನು ಉಳಿಸಿಕೊಂಡು ಬರುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಾ ಇವೆ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಭಕ್ತ ಶ್ರೀಹರಿ ದಿಗ್ಗಾವಿ ಧಾರವಾಡ ಇವರ ಶಿಷ್ಯರುಗಳಾದ ಕುಮಾರಿ ರಯಿ ಗಲಗಲಿ ಹಾಗೂ ಕುಮಾರ್ ಸಮರ್ಥ ಇವರುಗಳ ತಬಲಾ ಸೋಲೋ ಕಾರ್ಯಕ್ರಮ ನಡೆಯಿತು. ಇದರಲ್ಲಿ ತಾಳ ತೀನ್ ತಾಳದಲ್ಲಿ ಉಠಾಣ್ ದಿಂದ ಪ್ರಾರಂಭ ಮಾಡಿ ಪೇμÁ್ಕರ ಗಳನ್ನು ತೀಶ್ರ ಮತ್ತು ಚತುಶ್ರದಲ್ಲಿ ನುಡಿಸಿ ಗತ್ ಮತ್ತು ಚಕ್ರದಾರಗಳನ್ನು ಪಡಂತ್ ಮಾಡಿ ನುಡಿಸಿದರು.
ನಂತರ ಗಾಯನ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಕಲಾವಿದರುಗಳಾದ ಸಂಪದಾ ಎಸ್ ಅವರು ಉಮಾ ಕಾತ್ಯಾಯಿನಿ ಗೌರಿ ಎನ್ನುವ ಪೂರಿಯಾ ಧನಾಶ್ರೀ ರಾಗದಲ್ಲಿ ಮತ್ತು ಶಿವ ಹರ ಶಂಕರ ಎಂಬ ಪರಮೇಶ್ವರಿ ರಾಗದಲ್ಲಿ ಶ್ರೀಮತಿ ರೇಖಾ ದಿನೇಶರವರರಿಂದ ಸ್ವರ ಸಂಯೋಜಿತಗೊಂಡ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.
ತದನಂತರ ಧನ್ಯಾ ಹೆಗಡೆ ಇವರು ಅಂಬರ ದುಂಬಿದ ಓಂಕಾರದ ಸ್ವರ ಎಂಬ ಶ್ರೀ ದಿವಾಕರ ಹೆಗಡೆ ಕೆರೆಹೊಂಡ ಇವರ ವಿರಚಿತ ಗೀತೆ ಹಾಗೂ ಪುರಂದರದಾಸರ ವಿರಚಿತ ಈ ಪರಿಯ ಸೊಬಗಾವ ಎಂಬ ಗೀತೆಗಳನ್ನು ಸುಂದರವಾಗಿ ಪ್ರಸ್ತುತಪಡಿಸಿದರು.
ಸಂಸ್ಥೆಯ ಇನ್ನೋರ್ವ ಉದಯೋನ್ಮುಖ ಕಲಾವಿದರಾದ ಮಧುಶ್ರೀ ಶೇಟ್ ಇವರು ಪ್ರಾಣದೇವ ನೀನಲ್ಲದೆ ಎಂಬಸುಂದರ ದಾಸರ ಪದ ಮತ್ತು ಕೃಷ್ಣ ಜನಾರ್ದನ ಎಂಬ ಗೀತೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಜನ ಮನಮುಟ್ಟುವಂತೆ ಹಾಡಿದರು.
ಕೊನೆಯಲ್ಲಿ ಹುಬ್ಬಳ್ಳಿಯವರಾದ ಪ್ರತಿಭಾ ತರ್ಲಗಟ್ಟಿ ಇವರು ತೇಲಿಸೋ ಇಲ್ಲ ಮುಳುಗಿಸೋ ಎನ್ನುವ ದಾಸರ ಪದ ವನ್ನು ಅತ್ಯಂತ ತನ್ಮಯತೆಯಿಂದ ಹಾಡಿದರು.ಇವರುಗಳಿಗೆ ತಬಲಾ ಸಹಕಾರದಲ್ಲಿ ಡಾಕ್ಟರ್ ಶ್ರೀಹರಿ ದಿಗ್ಗಾವಿ ಅವರು ಹಾಗೂ ಹಾರ್ಮೋನಿಯಂದಲ್ಲಿ ಬಸವರಾಜ ಹಿರೇಮಠ ಇವರುಗಳು ಸಹಕರಿಸಿದರು.
ಕೊನೆಯದಾಗಿ ವಿದುಷಿ ರೇಖಾ ದಿನೇಶ ರವರು ತಮ್ಮ ಗಾಯನ ಕಾರ್ಯಕ್ರಮವನ್ನು ನಡೆಸಿ ಕೊಟ್ಟು ಮೊದಲಿಗೆ ರಾಗ ಮಧುಕೌಂಸ ದಲ್ಲಿ ಬಡಾ ಖ್ಯಾಲ್ ಮತ್ತು ಛೋಟಾ ಖ್ಯಾಲ್ ಹಾಗೂ ತರಾನಾ ಗಳನ್ನು ಜನ ಮನರಂಜಿಸುವಂತೆ ಹಾಡಿದರು.
ತದನಂತರ ಹುಬ್ಬಳ್ಳಿಯವರೇ ಆದ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ಸಂಸ್ಥಾಪಕರಾದ ಪ್ರದೀಪ್ ಕೆ ವಿ ಅವರ ವಿರಚಿತ ದಾಶರಥಿಯೆ ನಿನ್ನ ದರುಶನದ ಸೌಭಾಗ್ಯ ಎಂಬ ಗೀತೆಗೆ ಸಂಗೀತ ಸಂಯೋಜನೆಯನ್ನು ಮಾಡಿ ಅತ್ಯಂತ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.ಈ ಗೀತೆಗೆ ಅಷ್ಟೇ ಸಮರ್ಥವಾಗಿ ನಾಟ್ಯಾಂಜಲಿ ಕಲಾ ಕೇಂದ್ರದ ಪ್ರಾಚಾರ್ಯರಾದ ಡಾ. ಸಹನಾ ಭಟ್ ಅವರ ಭಾವಾಭಿನಯ ಅತ್ಯಂತ ಮನೋಹರವಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ನಂತರದಲ್ಲಿ ರೇಖಾ ದಿನೇಶವರು ಏನೀ ಮಹಾನಂದವೇ ಎನ್ನುವ ಡಿವಿಜಿ ಅವರ ಭಾವಗೀತೆಯನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಗೊಳಿಸಿ ಮೆಚ್ಚುಗೆ ಗಳಿಸಿದರು.ಹಾಗೂ ನಾದಪ್ರಿಯ ಶಿವನೆಂಬರು ಎಂಬ ಬಸವಣ್ಣನವರ ವಚನ ಮತ್ತು ಕೊನೆಯಲ್ಲಿ ಭೈರವಿ ರಾಗದಲ್ಲಿ ನೀಲಲೋಹಿತ ಎಂಬ ಶಿವನ ಕುರಿತಾದ ದಾಸರ ಪದವನ್ನು ಅತ್ಯಂತ ಮನೋಜ್ಞವಾಗಿ ಪ್ರಸ್ತುತಪಡಿಸಿದರು.ಇವರಿಗೆ ಅತ್ಯಂತ ಸಮರ್ಥವಾಗಿ ತಬಲಾ ಸಾಥಿ ಯನ್ನು ಡಾ.ಶ್ರೀಹರಿ ದಿಗ್ಗಾವಿ ಇವರು ನಿರ್ವಹಿಸಿ ದರೆ ಹಾರ್ಮೋನಿಯಂ ದಲ್ಲಿ ಬಸವರಾಜ ಹಿರೇಮಠ ಅವರು ಸಹಕರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸರ್ವಮಂಗಳಾ ಹುಬ್ಬಳ್ಳಿ ಅವರು ನಿರ್ವಹಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ದಿನೇಶ್ ಹೆಗಡೆ ಅವರು ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.