ಶಿರಸಿ: 9 ದಿನಗಳ ಕಾಲ ವಿಜೃಂಭಣೆಯಿಂದ ನಡೆದ ದಕ್ಷಿಣ ಭಾರತದ ಅತೀ ದೊಡ್ಡ ಹಾಗೂ ನಾಡಿನ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ಸಂಭ್ರಮಕ್ಕೆ ತೆರೆ ಬಿದ್ದಿದ್ದು, ಜಾತ್ರೆಯ ಸಂದರ್ಭದಲ್ಲಿ ಅಂಗಡಿ ಮುಂಗಟ್ಟು ಹರಾಜು ಹಾಗೂ ಇತರ ಮೂಲಗಳಿಂದ ನಗರಸಭೆಗೆ ಒಟ್ಟು 42.64 ಲಕ್ಷ ರೂ. ಆದಾಯ ಬಂದಿದೆ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು.
ಸೋಮವಾರ ನಗರಸಭೆ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿಅವರು ಈ ಕುರಿತು ಮಾಹಿತಿ ನೀಡಿ, ನಗರಸಭೆಯಿಂದ ದೇವಿಕೆರೆ, ಕೋಟೆಕೆರೆ, ಶಿವಾಜಿ ಚೌಕ, ಚಿಲುಮೆಕೆರೆ, ಉಡುಪಿ ಹೋಟೆಲ್ ಪಕ್ಕ ಸೇರಿ ಒಟ್ಟು 199 ಅಂಗಡಿಗಳ ಜಾಗವನ್ನು ಹರಾಜು ಮಾಡಲಾಗಿತ್ತು. ಇದರಿಂದ 35,72,686 ರೂ. ಆದಾಯ ಬಂದಿದೆ. ಕೋಟೆಕೆರೆಯಲ್ಲಿ ಬೋಟಿಂಗ್‌ನಿಂದ 5.55 ಲಕ್ಷ ರೂ., ಬ್ಯಾನರ್, ಕಟೌಟ್ ನಿಂದ 25 ಸಾವಿರ, ವಿದ್ಯುತ್ ನಿರಪೇಕ್ಷಣಾ ಪತ್ರದಿಂದ 55 ಸಾವಿರ ರೂ. ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಅನುಮತಿಯಿಂದ 51 ಸಾವಿರ ರೂ. ಆದಾಯ ಬಂದಿದೆ ಎಂದರು.
ಅದೇ ರೀತಿ ನಗರಸಭೆ ಜಾತ್ರಾ ಕಾಮಗಾರಿಗಳು, ನೀರಿನ ಟ್ಯಾಂಕರ್ ಬಾಡಿಗೆಗೆ ಒಟ್ಟು 2.21 ಕೋಟಿ ರೂ. ಖರ್ಚಾಗಿದೆ. ಇದರಲ್ಲಿ ಶಾಶ್ವತ ಕಾಮಗಾರಿಯೂ ಒಳಗೊಂಡಿದೆ ಎಂದರು. ಕಳೆದ ಎರಡು ತಿಂಗಳಿಂದ ಪೂರ್ವ ತಯಾರಿ ಸಭೆ ನಡೆಸಿದ್ದರಿಂದ ಜಾತ್ರೆ ಉತ್ತಮವಾಗಿ ನಡೆದಿದೆ. ಎಲ್ಲಇಲಾಖೆಗಳ ಸಹಕಾರದಲ್ಲಿ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.
ಮಾರಿಕಾಂಬಾ ಜಾತ್ರೆ ಸಂಪನ್ನ;
ನಗರಸಭೆ ಅಧಿಕಾರಿ ವರ್ಗ ಹೊಸಬರಿದ್ದರಿಂದ ನಾವೂ ಸಹ ಜಾತ್ರೆಯನ್ನು ಉತ್ತಮವಾಗಿಸಲು ಚಾಲೆಂಜ್ ಆಗಿ ತೆಗೆದುಕೊಂಡಿದ್ದೆವು. ಕೋವಿಡ್ ಭಯದಲ್ಲಿ ಉಳಿದೆಡೆಯ ಜಾತ್ರೆಗಳು ಸ್ಥಗಿತಗೊಂಡಿದ್ದರೂ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವ ದೃಢ ನಿಲುವಿನಿಂದ ಜಾತ್ರೆ ಸಾಧ್ಯವಾಗಿದೆ. ಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಶಿವರಾಮ ಹೆಬ್ಬಾರ್ ಅವರ ಸಲಹೆಯಂತೆ ಜಾತ್ರೆಯನ್ನು ಉತ್ತಮವಾಗಿ ನಡೆಸಿದ್ದೇವೆ ಎಂದರು.