ಹುಬ್ಬಳ್ಳಿ:ಕಳೆದ 4 ದಶಕಗಳಿಂದ ವಿಧಾನ ಪರಿಷತ್ತಿನ ಸದಸ್ಯರಾಗಿ ಶಿಕ್ಷಕರ, ಶಿಕ್ಷಣ ಕ್ಷೇತ್ರದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಎಲ್ಲ ಜಾತಿ ಜನಾಂಗ ಹಾಗೂ ಸಮುದಾಯಗಳೊಂದಿಗೂ ಸಾಮರಸ್ಯ ಭಾವನೆಯಿಂದ ಕೆಲಸ ಮಾಡುತ್ತಿರುವದು ಅವರ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ಸಮಾಜದಲ್ಲಿ ಹಿಂದುಳಿದ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರೊಂದಿಗೆ ಅತಿ ಹೆಚ್ಚು ಬಾಂಧವ್ಯ ಹೊಂದಿ ಅವರ ಸಂಕಷ್ಟಗಳಿಗೆ ಸದಾ ಕಾಲ ಸ್ಪಂದಿಸುತ್ತಿರುವ ಅವರು ಅವಕಾಶ ಸಿಕ್ಕಾಗಲೆಲ್ಲ ಈ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತ ಹಿಂದುಳಿದ ವರ್ಗಗಳ ಜನರ ಭವಿತವ್ಯಕ್ಕೆ ಹತ್ತು ಹಲವು ವೈವಿಧ್ಯಮಯ ಚಟುವಟಿಕೆಗಳ ಮೂಲಕ ಅವರ ಬದುಕು ಹಸನುಗೊಳಿಸುವಲ್ಲಿ ನಿರತಾಗಿದ್ದಾರೆ. ಇದಕ್ಕೆಲ್ಲ ಪುಷ್ಟಿ ನೀಡುವಂತೆ ಹುಬ್ಬಳ್ಳಿಯ ತಮ್ಮ ನಿವಾಸ, ಕಚೇರಿ ಹಾಗೂ ಅವರ ಜೀವಸೆಲೆಯಾಗಿರುವ ನಿಸರ್ಗ ತೋಟದಲ್ಲಿಯೂ ಸಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಹಿಂದುಳಿದ ವರ್ಗಗಳ ಜನರಿಗೆ ಕೆಲಸ ನೀಡಿ ಅವರ ಬಾಳನ್ನು ಹಸನುಗೊಳಿಸುತ್ತಿದ್ದಾರೆ.
ಕಳೆದ 40 ವರ್ಷಗಳಿಂದ ಹೊರಟ್ಟಿಯವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಭೀಮಪ್ಪ ಪೂಜಾರ ಕುಟುಂಬದ ಎಲ್ಲ ರೀತಿಯ ಬೆಳವಣಿಗೆಗೆ ಸದಾಕಾಲ ಸ್ಪಂದಿಸುತ್ತಿರುವ ಬಸವರಾಜ ಹೊರಟ್ಟಿ ಇತ್ತೀಚೆಗೆ ನಿಧನರಾದ ಭೀಮಪ್ಪ ಪೂಜಾರ ಅವರ ಮಗಳ ಗಂಡ ಸಂತೋಷ ಲಕ್ಷಾಂಪೂರ ಅವರ ಕುಟುಂಬದ ಭವಿಷ್ಯದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರ ಮೂಲಕ ಸಭಾಪತಿ ಹೊರಟ್ಟಿಯವರು ಮಾನವೀಯತೆ ಮೆರೆಯುವದರ ಜೊತೆಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಏಳಿಗೆಯಾಗಬೇಕೆನ್ನುವ ತಮ್ಮ ಸಂಕಲ್ಪದ ಬದ್ಧತೆ ಪ್ರದರ್ಶಿಸಿದ್ದಾರೆ.
ಸಂತೋಷ ಲಕ್ಷಾಂಪೂರ ಅವರಿಗೆ ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಹೀಗೆ ಮೂರು ಜನ ಮಕ್ಕಳಿದ್ದು ಅವರೆಲ್ಲರ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿರುವ ಸಭಾಪತಿ ಆ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲು ಮುಂದಾಗಿರುವದು ನಿಜವಾಗಿಯೂ ಹೊರಟ್ಟಿಯವರ ಮಾನವೀಯತೆಯ ಕಳಕಳಿಗೆ ನೈಜ ಸಾಕ್ಷಿಯಾಗಿದೆ.
ಹುಬ್ಬಳ್ಳಿಯ ಅತ್ಯಂತ ಹಿಂದುಳಿದ ಹಾಗೂ ಕೊಳಚೆ ಪ್ರದೇಶವಾಗಿರುವ ಗಣೇಶಪೇಟೆಯ ಕುಲಕರ್ಣಿ ಹಕ್ಕಲದಲ್ಲಿರುವ ದಿವಂಗತ ಸಂತೋಷ ಲಕ್ಷಾಂಪೂರ ಅವರ ಮನೆಗೆ ತಮ್ಮ ಧರ್ಮಪತ್ನಿ ಶ್ರೀಮತಿ ಹೇಮಲತಾ ಹೊರಟ್ಟಿ ಅವರೊಂದಿಗೆ ಇಂದು ಭೇಟಿ ನೀಡಿದ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ, ಭೀಮಪ್ಪ ಪೂಜಾರ ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡ ಭೀಮಪ್ಪನ ಪುತ್ರಿ ರೇಣುಕಾ ಹಾಗೂ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಬಡವರ, ದಲಿತರ ಹಾಗೂ ಹಿಂದುಳಿದ ವರ್ಗದವರ ಬಗೆಗೆ ಅಪಾರ ಕಾಳಜಿ ಹೊಂದಿರುವ ಅವರು ಈ ಹಿಂದೆಯೂ ಸಹ ಇಂತಹ ಹಲವಾರು ಕುಟುಂಬಗಳಿಗೆ ಆಸರೆ ಒದಗಿಸಿ ಎಲೆಮರೆಯ ಕಾಯಿಯಂತೆ ಹಿಂದುಳಿದ ವರ್ಗಗಳ ಜನತೆಗೆ ಸಹಕಾರಿಯಾಗಿದ್ದಾರೆ. ಸದಾಕಾಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳ ಜನರ ಶ್ರೇಯೋಭಿವೃದ್ಧಿಗಾಗಿ ಚಿಂತನೆ ನಡೆಸುವ ಮೂಲಕ ಸಮಾಜದ ಎಲ್ಲ ಸಮುದಾಯಗಳ ಬಗೆಗೆ ಕಾಳಜಿ ಹೊಂದಿ ಜನಾನುರಾಗಿಯಾಗಿ ಕೆಲಸ ಮಾಡುತ್ತಿದ್ದಾರೆ.