ಶಿರಸಿ: ಅಡಿಕೆ ಆರೋಗ್ಯಕ್ಕೆ ಹಾನಿಕಾರಕ. ಅಡಿಕೆಯನ್ನು ನಿಷೇಧಿಸಬೇಕೆಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಜಾರ್ಖಂಡದ ಖೇಡ್ಡಾದ ಸಂಸದ ನಿಶಿಕಾಂತ ದುಬೆ ಅವರನ್ನು ಅಡಿಕೆ ಬೆಳೆಗಾರರ ಹಾಗೂ ಸಹಕಾರಿ ಸಂಸ್ಥೆಗಳ ನಿಯೋಗವು ಭೇಟಿ ಮಾಡಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಅಡಿಕೆ ಬೆಳೆಯ ಸಂಪೂರ್ಣ ಮಾಹಿತಿಯನ್ನು ನೀಡಿದೆ.
ಅನೇಕ ದಶಕಗಳಿಂದ ಅಡಿಕೆ ತಿನ್ನುವ ಪದ್ಧತಿಯಿದೆ. ಆರೋಗ್ಯದ ಮೇಲೆ ಅಡಿಕೆ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಬದಲಾಗಿ ಅಡಿಕೆಯಲ್ಲಿ ಅನೇಕ ಔಷಧೀಯ ಗುಣಗಳಿವೆ ಎಂದು ಸಂಸದರಿಗೆ ನೀಯೋಗವು ಮನವರಿಕೆ ಮಾಡಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮರ್, ಸಚಿವೆ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಸ್ಮೃತಿ ಇರಾನಿ ಅವರೊಂದಿಗೆ ಅಡಿಕೆಗೆ ಸಂಬಂಧಿಸಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿಯೋಗವು ಮಾತುಕತೆ ನಡೆಸಿದೆ. ಕೇಂದ್ರ ಸಚಿವಾಲಯದಿಂದ ಅಡಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಎಕ್ಸ್ಪರ್ಟ್ಸ್ ಕಮಿಟಿ ರಚಿಸಲು ಸಚಿವರುಗಳು ಒಪ್ಪಿಗೆ ಸೂಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಡಿಕೆ ಹಳದಿ ರೋಗದ ಪರಿಹಾರ ಹಾಗೂ ಈ ರೋಗದ ಕುರಿತು ಅಧ್ಯಯನ ನಡೆಸಿ ಸಂಶೋಧನೆ ಕೈಗೊಳ್ಳಬೇಕು. ಅಡಿಕೆ ಜಿಎಸ್‌ಟಿ ತೆರಿಗೆಯೊಂದಿಗೆ ಎಪಿಎಂಸಿ ಶುಲ್ಕವನ್ನು ವಿಲೀನಗೊಳಿಸಬೇಕು. ಅಕ್ರಮ ಅಡಿಕೆ ಆಮದನ್ನು ತಡೆಯಲು ಕ್ರಮಕೈಗೊಳ್ಳಬೇಕೆಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ವಿತ್ತ ಸಚಿವೆ, ನಿರ್ಮಲಾ ಸೀತಾರಾಮನ್, ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಒಳಗೊಂಡು ಹಲವು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ. ಮತ್ತು ರಾಷ್ಟçಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ ಅಡಿಕೆಗೆ ಸಂಬಂಧಿಸಿದ ಪುಸ್ತಕವನ್ನು ನೀಡಿ ಅಡಿಕೆ ಕೃಷಿ ಹಾಗೂ ಅಡಿಕೆ ಬೆಳೆಗಾರರ ಬಗ್ಗೆ ವಿವರಿಸಲಾಯಿತು. ರಾಷ್ಟçಪತಿಗಳು ಅಡಿಕೆ ಬೆಳೆಗಾರರ ಬಗ್ಗೆ ಪೂರಕವಾಗಿ ಸ್ಪಂದಿಸಿದರು.
ಅಡಿಕೆ ಮಹಾಮಂಡಳ ಅಧ್ಯಕ್ಷರಾದ ಹಾಗೂ ಮಾಮ್‌ಕೋಸ್ ನಿದೇರ್ಶಕರಾದ ವೈ.ಎಸ್. ಸುಬ್ರಹ್ಮಣ್ಯ, ಅಡಿಕೆ ಮಹಾಮಂಡಳದ ಉಪಾಧ್ಯಕ್ಷರಾದ ಹಾಗೂ ಟಿಎಸ್‌ಎಸ್ ನಿರ್ದೇಶಕರಾದ ಶಶಾಂಕ ಶಾಂತಾರಾಮ ಹೆಗಡೆ, ಶೀಗೇಹಳ್ಳಿ, ಕೆಆರ್‌ಎಂ ಅಧ್ಯಕ್ಷರಾದ ಎಚ್.ಎಸ್.ಮಂಜಪ್ಪ, ಸೊರಬ ತುಮ್ಕೋಸದ ನಿರ್ದೇಶಕ ಶಿವಕುಮಾರ, ಕ್ಯಾಂಪ್ಕೋ ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ಡಾ. ಚೌಡಪ್ಪ ಮತ್ತು ಕರ್ನಾಟಕ ಸರ್ಕಾರದ ಅಡಿಕೆ ಟಾಸ್ಕ್ಫೋರ್ಸ್ ಪ್ರತಿನಿಧಿ ಪ್ರಸಾದ ನಿಯೋಗದಲ್ಲಿ ಇದ್ದರು.