
ಶಿರಸಿ: ಕೋವಿಡ್ ಆತಂಕದ ನಡುವೆಯೂ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ಯಾವುದೇ ತೊಂದರೆಯಾಗದೇ ಸುಗಮವಾಗಿ ನಡೆದಿದೆ.
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಸೋಮವಾರ 61 ಪರೀಕ್ಷಾ ಕೇಂದ್ರಗಳಲ್ಲಿ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಒಟ್ಟು 21 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಓರ್ವ ವಿದ್ಯಾರ್ಥಿ ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾನೆ. ಗಣಿತ ಪರೀಕ್ಷೆ ನೋಂದಾಯಿಸಿದ 10,528 ವಿದ್ಯಾರ್ಥಿಗಳಲ್ಲಿ 17, ವಿಜ್ಞಾನ 10,511ರಲ್ಲಿ 20 ಹಾಗೂ ಸಮಾಜ ವಿಜ್ಞಾನ ಪರೀಕ್ಷೆಗೆ ನೋಂದಾಯಿಸಿದ 10,365ರಲ್ಲಿ 17 ವಿದ್ಯಾರ್ಥಿಗಳು ಗೈರಾಗಿದ್ದರು. ಎಸ್.ಓ.ಪಿ ಮಾರ್ಗಸೂಚಿ ಹಾಗೂ ಕೊರೊನಾ ನಿಯಮ ಪಾಲನೆಯೊಂದಿಗೆ ಪರೀಕ್ಷೆ ನಡೆಯಿತು.
102 ವಿದ್ಯಾರ್ಥಿಗಳಿಗೆ ಉಚಿತ ಆಟೋ ಸೇವೆ: ಇಲ್ಲಿಯ ಶ್ರೀ ಮಾರಿಕಾಂಬಾ ಆಟೋ ಚಾಲಕರು, ಮಾಲಕರು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೋಮವಾರ ನೀಡಿದ ಉಚಿತ ಆಟೋ ಸೇವೆಯನ್ನು 102 ವಿದ್ಯಾರ್ಥಿಗಳು ಪಡೆದರು. ವಿವೇಕಾನಂದ ನಗರ, ಲಂಡಕನಳ್ಳಿ, ಕಸ್ತೂರಬಾ ನಗರ, ಕೋಟೆಕೆರೆ ರಸ್ತೆ, ಹುಲೇಕಲ್ ರಸ್ತೆ, ಹೊಸ ಬಸ್ ನಿಲ್ದಾಣ, ಗಣೇಶನಗರ, ನಿಲೇಕಣಿ, ಗಾಂಧಿ ನಗರ, ಬನವಾಸಿ ರಸ್ತೆ, ವೀರಭದ್ರಗಲ್ಲಿ, ಮರಾಠಿಕೊಪ್ಪ, ವಿದ್ಯಾನಗರ, ಯಲ್ಲಾಪುರ ರಸ್ತೆ, ರೋಟರಿ ಆಸ್ಪತ್ರೆ, ಹಳೆ ಬಸ್ ನಿಲ್ದಾಣದ ಸುತ್ತಮುತ್ತಲಿನ ಎಸ್.ಎಸ್. ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಉಚಿತ ಆಟೋ ಸೇವೆ ಕಲ್ಪಿಸಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ಆಟೋ ಸೇವೆ ಪ್ರಾರಂಭವಾಗಿದ್ದರಿಂದ ಕೆಲವರು ಆಟೋ ಹುಡುಕಿಕೊಂಡು ಬಂದರೆ, ಕೆಲವರು ದೂರವಾಣಿ ಮೂಲಕ ಸಂಪರ್ಕಿಸಿ ಪರೀಕ್ಷೆ ಕೇಂದ್ರಗಳಿಗೆ ತೆರಳಿದರು. ಪರೀಕ್ಷೆ ಮುಗಿದ ನಂತರ ಬೆಳಿಗ್ಗೆ ಸೇವೆ ಪಡೆದಿದ್ದ ವಿದ್ಯಾರ್ಥಿಗಳು ಮರಳಿ ಆಟೋ ಸೇವೆ ಪಡೆದು ಮನೆಗೆ ತೆರಳಿದರೆಂದು ಶ್ರೀ ಮಾರಿಕಾಂಬಾ ಆಟೋ ಚಾಲಕ, ಮಾಲಕರ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಗೌಡ ತಿಳಿಸಿದ್ದಾರೆ.