
ಶಿರಸಿ: ಯಲ್ಲಾಪುರ ರಾಜ್ಯ ಹೆದ್ದಾರಿಯ ಸಹಸ್ರಲಿಂಗ ತಿರುವಿನ ಬಳಿ ಉಂಟಾಗಿದ್ದ ಅಪಾಯಕಾರಿ ಹೊಂಡವನ್ನು ಮಣ್ಣು,ಜಲ್ಲಿಯಿಂದ ಮುಚ್ಚಿ ಸವಾರರಿಗೆ ಅನುಕೂಲವಾಗುವ ಕಾರ್ಯವೊಂದನ್ನು ಇಲ್ಲಿಯ ‘ಕಲರವ ಸೇವಾ ಸಂಸ್ಥೆ’ ಮಾಡಿದೆ.
ರಸ್ತೆಯಲ್ಲಿ ಉಂಟಾಗಿದ್ದ ಈ ಹೊಂಡದ ಕುರಿತಾಗಿ ಅನೇಕ ಬೈಕ್ ಸವಾರರು “e-ಉತ್ತರ ಕನ್ನಡ”ದ ಗಮನಕ್ಕೆ ತಂದಿದ್ದರು. ಈ ನಿಟ್ಟಿನಲ್ಲಿ ಭೈರುಂಬೆ ಪಂಚಾಯತ ಸದಸ್ಯ ಹಾಗು ಕಲರವ ಸೇವಾ ಸಂಸ್ಥೆ ಅಧ್ಯಕ್ಷ ಕಿರಣ ಭಟ್ಟ ಭೈರುಂಬೆ ಗಮನಕ್ಕೆ ತರಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ತಮ್ಮ ಕಲರವ ಸಂಸ್ಥೆಯ ಕಾರ್ಯದರ್ಶಿ ಸಂತೋಷ ಪೂಜಾರಿ, ಸದಸ್ಯರಾದ ಗೌರೀಶ ಮತ್ತು ನಾಗರಾಜರೊಡಗೂಡಿ ಸವಾರರಿಗೆ ಕಂಟಕಪ್ರಾಯವಾಗಿದ್ದ ಹೊಂಡವನ್ನು ಮುಚ್ಚುವುದರ ಮೂಲಕ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.
ಸಂಸ್ಥೆಯ ಸಾಮಾಜಿಕ ಕೆಲಸವನ್ನು ‘e-ಉತ್ತರ ಕನ್ನಡ’ ಶ್ಲಾಘಿಸುವುದರ ಜೊತೆಗೆ ನಮ್ಮೂರಿನಲ್ಲೂ ಇಂತಹ ಅಪಾಯಕಾರಿ ಹೊಂಡ-ಗುಂಡಿಗಳಿದ್ದಲ್ಲಿ, ಅದನ್ನು ಸರಿಮಾಡಲು ಮತ್ಯಾರೋ ಬರಬೇಕು ಎನ್ನುವ ಮನಸ್ಥಿಯಿಂದ ಹೊರಬಂದು ಅಂತಹ ಕಾರ್ಯವನ್ನು ನಾವೇ ಮಾಡಲು ಮುಂದಾಗುವ ಯೋಚನೆ ನಮ್ಮದಾಗಲಿ ಎಂಬುದು ‘e – ಉತ್ತರ ಕನ್ನಡ’ದ ಕಾಳಜಿಯಾಗಿದೆ.