ಶಿರಸಿ: ಬುಧವಾರ ನಡೆದ ಮಾರಿಕಾಂಬಾ ದೇವಿಯ ರಥೋತ್ಸವದೊಂದಿಗೆ ಜಾತ್ರೆಗೆ ಕಳೆ ಬಂದಿದೆ. ಭಕ್ತರ ಸೇವೆಯೊಂದಿಗೆ ಶೋಭಾಯಾತ್ರೆ ಮೂಲಕ ಸಾವಿರಾರು ಭಕ್ತರ ಜಯಘೋಷದೊಂದಿಗೆ ಮಾರಿಕಾಂಬೆಯನ್ನು ಗದ್ದುಗೆಗೆ ಕರೆತರಲಾಯಿತು.
“ದೇವಸ್ಥಾನದಿಂದ ಬೆಳಿಗ್ಗೆ 7.27ಕ್ಕೆ ದೇವಿಯ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. 8.36ಕ್ಕೆ ದೇವಿಯ ಮೆರವಣಿಗೆ ಆರಂಭಗೊಂಡಿತು. ಬಣ್ಣಗಳಿಂದ ಕಂಗೊಳಿಸುತ್ತಿದ್ದ ರಥದಲ್ಲಿ ಕುಳಿತ ಮಾರಿಕಾಂಬೆ ಪೇಟೆಯುದ್ದಕ್ಕೂ ಇಣುಕಿಣುಕಿ ನೋಡುತ್ತ ಸಾಗುವಂತೆ ಭಾಸವಾಯಿತು. ದೇವಿ ಮೆರವಣಿಗೆ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಭಾವಪರವಶರಾದರು. ಆವೇಶದೊಂದಿಗೆ ಹರಕೆ ಒಪ್ಪಿಸಿದರು. ಅಡಿಕೆ ಸಿಂಗಾರ, ಬೇವಿನ ಸೊಪ್ಪು ಹಿಡಿದು ಮೈತುಂಬ ಕುಂಕುಮ ಸೋಕಿಕೊಂಡಿದ್ದ ದುರ್ಮುರ್ಗಿಯರು, ಲಂಬಾಣಿ ಮಹಿಳೆಯರು ಭಕ್ತಿಪರವಶಗೊಂಡು ಅರಚಾಡುತ್ತಿದ್ದರು. ಗಾಳಿಮಾರಿಗಳು ಮೈಗೆ ಚಾಟಿ ಬೀಸಿಕೊಂಡು ದೇವಿಯ ಲಕ್ಷ ತಮ್ಮತ್ತ ತಿರುಗಲಿ ಎಂದು ಪ್ರಯತ್ನಿಸುತ್ತಿದ್ದರು.
ಡೊಳ್ಳು ಕುಣಿತ, ಜಾಂಜ್ ಬಾರಿಸುವವರು ಶೋಭಾಯಾತ್ರೆಗೆ ಮೆರಗು ತಂದರು. ಸುಮಾರು ಒಂದೂವರೆ ಗಂಟೆಗಳ ಅವಧಿಯಲ್ಲಿ ದೇವಿಯ ರಥ ಬಿಡಕಿಬೈಲಿನ ಗದ್ದುಗೆ ಸಮೀಪ ತೆರಳಿತು. ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ಮೇಟಿದೀಪ ಕರೆತಂದ ಬಳಿಕ 12.40ರ ನಂತರ ರಥದಿಂದ ದೇವಿಯನ್ನು ಇಳಿಸಿ ಬಾಬುದಾರರು ಗದ್ದುಗೆಗೆ ಕರೆದೊಯ್ದರು. ಈ ವೇಳೆ ‘ಉಧೋ ಉಧೋ ಮಾರಮ್ಮ’, ‘ಮಾರಿಕಾಂಬೆ ಕಿ ಜೈ’ ಎಂದು ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.
ರಥೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿತ್ತು. ನೂರಾರು ಸಂಖ್ಯೆಯ ಪೊಲೀಸರು ಮೆರವಣಿಗೆಯಲ್ಲಿ ಜನರನ್ನು ನಿಯಂತ್ರಿಸುತ್ತಿದ್ದರು. ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಭಕ್ತರಿಗೆ ಪಾನಕ, ನೀರು ವಿತರಿಸಿದರು.