ಶಿರಸಿ: ಮಾ.15 ರಿಂದ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಆರಂಭವಾಗಿದ್ದು, ದೇವಾಲಯವು ಕಾವಿ ಕಲೆಯ ಚಿತ್ತಾರದಿಂದ ಸಿಂಗಾರಗೊಂದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಸಾಂಪ್ರದಾಯಿಕ ಕಲೆಯಾಗಿ ಗುರುತಿಸಿಕೊಂಡಿರುವ ಈ ಕಾವಿ ಕಲೆಯು ಶತಮಾನಗಳಿಂದಲೂ ಈ ದೇವಾಲಯದ ಗೋಡೆಗಳ ಮೇಲಿರುವ ಚಿತ್ತಾರಗಳು ಮಾಸದಂತೆ ಇಂದಿಗೂ ಅದರ ಮೂಲ ಸ್ವರೂಪವನ್ನು ಕಾಪಾಡಿಕೊಂಡು ಬಂದಿದೆ .
ಕಾವಿ ಕಲೆಯಿಂದ ದೇವಾಲಯಕ್ಕೆ ಮೆರಗು-
ದೇವಾಲಯದ ಬ್ರಹತ್ ಗೋಡೆಗಳ ಮೇಲೆ ಕಳೆದ ಒಂದು ತಿಂಗಳಿಂದ ಕಾವಿ ಕಲೆ ಚಿತ್ತಾರ ಬಿಡಿಸುವ ಕೆಲಸ ಆರಂಭವಾಗಿದೆ. ದೇವಾಲಯದ ನುಣುಪಾದ ಗೋಡೆಗಳ ಮೇಲೆ ನಾನಾ ಬಗೆಯ ಚಿತ್ರಗಳನ್ನು ಬಿಡಿಸಲಾಗಿದೆ. ದೇವಿಯ ಇತಿಹಾಸ ಸಾರುವ ಚಿತ್ರ, ಕರಾವಳಿ, ಮಲೆನಾಡು ಭಾಗದ ಸಂಪ್ರದಾಯ, ಸಂಸ್ಕೃತಿಯ ಬಿಂಬ ಈ ಕಲೆಯಲ್ಲಿ ಅಡಕವಾಗಿದೆ. ದೇವಾಲಯದ ಗೋಡೆಯನ್ನು ಸುಣ್ಣ ಮತ್ತು ಬೆಲ್ಲದಿಂದ ತಯಾರಿಸಿದ ಗಾರೆಯಿಂದ ನಿರ್ಮಿಸಲಾಗಿದೆ.
ಬಣ್ಣದಿಂದ ಕಾವಿ ಕಲೆಗೆ ಸೊಬಗು
ಹಿಂದೆ ಕಾವಿ ಕಲೆ ಬಿಡಿಸಲು ಬಳಸುವ ಬಣ್ಣವೂ ಸಹ ಸಾಂಪ್ರದಾಯಕವಾಗಿತ್ತು. ಬೆಳ್ಳನೆಯ ಗೋಡೆ ಮೇಲೆ ಕೆಂಪು ಬಿಡಿಸುವ ಈ ಚಿತ್ತಾರದ ಬಣ್ಣವನ್ನು ಹಿಂದೆ ಮೆಹಂದಿ, ಕೆಮ್ಮಣ್ಣು ಮತ್ತಿತರ ಗ್ರಾಮಿಣಭಾಗದ ಪದಾರ್ಥಗಳ ಮಿಶ್ರಣದಿಂದ ತಯಾರಿಸುತ್ತಿದ್ದರು. ಆದರೆ ಇತ್ತೀಗೆ ಆಯಿಲ್ ಪೇಂಟ್ ನಿಂದ ಈ ಚಿತ್ರ ಬಿಡಿಸಲಾಗುತ್ತಿದೆ. ಇದಕ್ಕಾಗಿ ದೇವಾಲಯ ಪ್ರತಿ ಎರಡು ವರ್ಷಕ್ಕೆ 10 ರಿಂದ 15 ಲಕ್ಷ ವ್ಯಯಿಸುತ್ತಿದೆ. ಅದೇನೆ ಇರಲಿ ಜಾನಪದ ಶೈಲಿಯ ಕಲೆ ಅಳಿವಿನಂಚಿನಲ್ಲಿರುವಾಗ ಅದನ್ನು ಉಳಿಸುವ ಮೂಲಕ ದೇವಾಲಯಕ್ಕೆ ಸಾಂಪ್ರದಾಯಿಕ ಸೊಗಡು ನೀಡುವ ಕಾರ್ಯ ಶಿರಸಿ ಮಾರಿಕಾಂಬಾ ದೇವಾಲಯದಿಂದ ನಡೆಯುತ್ತಿರುವುದು ಸಂತೋಷದ ಸಂಗತಿ. ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಮತ್ತೆ ಕಾವಿ ಕಲೆ ಹೊಸ ಬಣ್ಣದಿಂದ ಕಂಗೊಳಿಸುತ್ತಿದ್ದು, ಜಾತ್ರೆ ಜತೆಗೆ ಕಾವಿ ಕಲೆಯ ಸೊಬಗು ಎಲ್ಲರ ಕಣ್ಮನ ಸೆಳೆಯುತ್ತಿದೆ.