ಶಿರಸಿ: ಮಾರಿಕಾಂಬಾ ದೇವಿಗೆ ಉಡಿ ಸೇವೆ ಅತ್ಯಂತ ಪ್ರಧಾನ ಸೇವೆವಾಗಿದ್ದು, ಈಗಾಗಲೇ ಜಾತ್ರೆಗೆ ಬರುವ ಭಕ್ತರ ಸೇವೆಗೆ 8 ಲಕ್ಷ ಉಡಿ ಸಿದ್ಧಗೊಂಡಿದೆ.
ಭಕ್ತರಿಂದ ದಿನವೊಂದಕ್ಕೆ ಲಕ್ಷಾಂತರ ಉಡಿ ದೇವಿಗೆ ಸಮರ್ಪಿಣೆಯಾಗುತ್ತದೆ. ಜಾತ್ರೆ ಸಂದರ್ಭದಲ್ಲಿ ದೇವಿ ಗದ್ದುಗೆಗೆ ಬಂದಾಗಿನಿಂದ ಮರಳುವ ವರೆಗೂ ಉಡಿ ಸೇವೆ ನಿರಂತರ ನಡೆಯುವುದರಿಂದ ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಪೂರ್ವಭಾವಿಯಾಗಿ 8 ಲಕ್ಷ ಉಡಿಯನ್ನು ಸಿದ್ಧಪಡಿಸಿದೆ.
ಮನೆಯಿಂದಲೇ ಭಕ್ತರು ಉಡಿಯನ್ನು ತಂದು ಸಮರ್ಪಿಸುವರಲ್ಲದೆ, ಸಿದ್ಧ ಉಡಿ ತುಂಬುವ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ದೇವಿಗೆ ಸಲ್ಲಿಸುವ ಉಡಿಯಲ್ಲಿ ಏನೆಲ್ಲಾ ಇದೆ !
ಉಡಿಯಲ್ಲಿ ಮುಖ್ಯವಾಗಿ ಅರಿಶಿಣ, ಕುಂಕುಮ, ಬಳೆ, ಕರಿಮಣಿ, ಅಕ್ಕಿ, ಕಾಯಿ, ಖಣ ಜೋಡಿಸಿ ರವಿಕೆ ಬಟ್ಟೆಯಲ್ಲಿ ಉಡಿ ಕಟ್ಟಿರುತ್ತಾರೆ. ಪ್ರತೀ ಉಡಿಗೆ 40 ರೂ. ನಿಗದಿ ಮಾಡಗಿದ್ದು, ಮಾ.15 ರಿಂದ 23 ರ ವರೆಗೆ 9ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ 7 ದಿನಗಳ ಕಾಲ ದೇವಿಗೆ ವಿವಿಧ ಸೇವೆಗಳು ನಿರಂತರ ನಡೆಯುತ್ತವೆ. ಆದರೆ ದೇವಿಗೆ ವಿಶೇಷ ಹರಕೆಯಾಗಿ ಉಡಿ ಸೇವೆ ನಡೆಯುತ್ತದೆ.
ಜಾತ್ರೆಗೆ ಆಗಮಿಸುವ ಪ್ರತಿಯೊಬ್ಬ ಮಹಿಳೆಯೂ ಉಡಿ ಸಮರ್ಪಿಸುವ ಸಂಪ್ರದಾಯ ಹೊಂದಿದ್ದು, ಸಾಕಷ್ಟು ಸಂಖ್ಯೆಯ ಉಡಿ ಸಲ್ಲಿಕೆ ಆಗುತ್ತದೆ. ಪ್ರತೀ ಜಾತ್ರೆಗೂ ಕನಿಷ್ಠ 12 ಲಕ್ಷ ಉಡಿ ದೇವಿಗೆ ಸಮರ್ಪಣೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ದೇವಾಲಯ ಆಡಳಿತ ಮಂಡಳಿ 5 ಲಕ್ಷ ಉಡಿ ಸಿದ್ಧ ಪಡಿಸಿದ್ದು, 8 ಲಕ್ಷ ಉಡಿ ಮಾರಾಟವಾಗುವ ನಿರೀಕ್ಷೆಯಲ್ಲಿದೆ. ಇನ್ನು ಜಾತ್ರಾ ಗದ್ದುಗೆ ಸುತ್ತ ಉಡಿ ಮರಾಟದ ಅಂಗಡಿಗಳೂ ಇರುವುದರಿಂದ ಭಕ್ತರಿಗೆ ಉಡಿ ಕೊರತೆ ಆಗದು ಎನ್ನುವ ಅಭಿಪ್ರಾಯ ದೇವಾಲಯ ಆಡಳಿತ ಮಂಡಳಿಯದ್ದು.
ಕಳೆದ 7 ದಿನಗಳಿಂದ ಉಡಿ ಕಟ್ಟುವ ಕಾರ್ಯ ದೇವಾಲಯದಲ್ಲಿ ನಿರಂತರ ನಡೆಯುತ್ತಿದೆ. 10 ಜನ ಮಹಿಳೆಯರ ತಂಡ ರಚಿಸಿದ್ದು, ಇಂತಹಾ 4 ತಂಡ ಹಗಲು-ರಾತ್ರಿಯೆನ್ನದೆ ಉಡಿ ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ.
ದೇವಾಲಯದಿಂದ ಸಿದ್ಧಪಡಿಸುವ ಪ್ರತೀ ಉಡಿಗೆ 40 ರೂ. ನಿಗಧಿ ಮಾಡಲಾಗಿದೆ. ಜಾತ್ರೆ ಪೂರ್ಣಗೊಳ್ಳುವವರೆಗೆ ಅಂದಾಜು 2ಕೋಟಿ ರೂ. ಆದಾಯ ದೇವಾಲಯಕ್ಕೆ ಸಂದಾಯ ಆಗುವ ನಿರೀಕ್ಷೆ ಇದೆ. ಅಂಗಡಿಗಳಲ್ಲಿ ಉಡಿಯೊಂದಕ್ಕೆ ಕನಿಷ್ಠ 70 ರೂ. ನಿಗದಿ ಮಾಡಲಾಗುತ್ತದೆ. ಜಾತ್ರೆ ಪ್ರಯುಕ್ತ ಒಟ್ಟಾರೆ 8 ರಿಂದ 10 ಲಕ್ಷ ಉಡಿ ಸಮರ್ಪಣೆಯಾಗಲಿದ್ದು, ಇದರಲ್ಲಿ 4ರಿಂದ 5ಲಕ್ಷ ಉಡಿ ಅಂಗಡಿಕಾರರಿಂದ ಮಾರಾಟ ಆಗುತ್ತದೆ. ಒಟ್ಟಾರೆ ಜಾತ್ರೆಯಲ್ಲಿ ಕೇವಲ ಉಡಿ ಮಾರಾಟದಿಂದಲೇ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ಆ ಮೂಲಕ ಆರ್ಥಿಕ ವಹಿವಾಟು ನಡೆದು ಅಭಿವೃದ್ಧಿಗೂ ಸಹಕಾರಿಯಾಗಿದೆ.