ಯಲ್ಲಾಪುರ:ತಾಲೂಕಿನ ಮಾವಿನಮನೆ ಗ್ರಾ.ಪಂ ವ್ಯಾಪ್ತಿಯ ಕುಗ್ರಾಮ ಬಂಕೊಳ್ಳಿಯಲ್ಲಿ 3.75 ಲಕ್ಷ ರೂ ವೆಚ್ಚದಲ್ಲಿ ಸೌರಚಾಲಿತ ಹಿಟ್ಟಿನ ಗಿರಣಿ ಮತ್ತು ಮಸಾಲೆ ಹಿಟ್ಟು ಮಾಡುವ ಯಂತ್ರವನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ನ ಅಧಿಕಾರಿ ರಾಘವೇಂದ್ರ ಆಚಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಣ್ಣ ಹಳ್ಳಿಗಳಲ್ಲಿ ಉದ್ಯಮಗಳಿಗೆ ಅವಕಾಶ ಕಲ್ಪಿಸಲು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ಸಸ್ಟೇನ್ ಪ್ಲಸ್ ವತಿಯಿಂದ ನೆರವು ನೀಡಲಾಗುತ್ತಿದೆ. ಸುಸ್ಥಿರ ಇಂಧನ ಸೌರಶಕ್ತಿಯಿಂದ ನಡೆಯುವ ಸಣ್ಣ ಉದ್ಯಮಗಳಿಂದ ಸುತ್ತಮುತ್ತಲಿನ ಸಮುದಾಯದವರಿಗೂ ಹಾಗೂ ಗ್ರಾಮೀಣ ಸಣ್ಣ ಉದ್ಯಮಿಗಳಿಗೂ ಅನುಕೂಲವಾಗಲಿದೆ ಎಂದರು.
ಸೆಲ್ಕೋ ಸಂಸ್ಥೆಯ ಶಿರಸಿ ವಿಭಾಗದ ವ್ಯವಸ್ಥಾಪಕ ಸುಬ್ರಾಯ ಹೆಗಡೆ ಮಾತನಾಡಿ ಸೆಲ್ಕೋ ಸಂಸ್ಥೆ ಈ ಯಂತ್ರಗಳಿಗೆ ಸೌರಶಕ್ತಿಯನ್ನು ಅಳವಡಿಸಿ ಅಗತ್ಯ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಯಂತ್ರವನ್ನು ಮನೆಯಲ್ಲಿ ಅಳವಡಿಸಿಕೊಂಡ ಮಹಾಬಲೇಶ್ವರ ಕುಣಬಿ, ಯಲ್ಲಾಪುರ ಭಾಗದ ಸೆಲ್ಕೋ ಪ್ರತಿನಿಧಿ ಪ್ರವೀಣ ಹೆಗಡೆ ಹಾಗೂ ಬಂಕೊಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.